
ಮಸ್ಕತ್ (ಒಮಾನ್)/ಟೆಹ್ರಾನ್ (ಇರಾನ್), 12 ಅಕ್ಟೋಬರ್ (ಹಿ.ಸ.):
ಒಮಾನ್‌ನ ಸೋಹಾರ್ ಬಂದರು ಸಮೀಪ ಲಂಗರು ಹಾಕಿದ್ದ ಕಚ್ಚಾ ತೈಲ ಸಾಗಣೆ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, ದಾಳಿಯ ಬಳಿಕ ಇಬ್ಬರು ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ಬ್ರಿಟನ್‌ನ ಸಮುದ್ರ ಭದ್ರತಾ ಸಂಸ್ಥೆ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ದೃಢಪಡಿಸಿದೆ.
ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಮಾನವರಹಿತ ವೈಮಾನಿಕ ವಾಹನದ ಮೂಲಕ ಹಡಗಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸ್ಥಳೀಯ ಅಧಿಕಾರಿಗಳು ಹಡಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ದಾಳಿಯಿಂದ ಪರಿಸರದ ಮೇಲಾಗಿರುವ ಪರಿಣಾಮಗಳ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಮೆರಿಕವು ಇರಾನ್‌ನ ಕೆಲವು ಷರತ್ತುಗಳಿಗೆ ಒಪ್ಪಿಗೆ
ಇದೇ ವೇಳೆ, ಸಂಘರ್ಷವನ್ನು ಅಂತ್ಯಗೊಳಿಸುವ ಸಂಬಂಧ ಇರಾನ್ ಮುಂದಿಟ್ಟಿರುವ ಏಳು ಷರತ್ತುಗಳ ಪೈಕಿ ಕೆಲವನ್ನು ಅಮೆರಿಕ ಒಪ್ಪಿಕೊಂಡಿದೆ ಎಂದು ಇರಾನ್‌ನ ಅಧಿಕಾರಿ ಮೊಹ್ಸೆನ್ ರೆಜಾಯಿ ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿರುವ ರೆಜಾಯಿ, ಏಳು ಷರತ್ತುಗಳ ಪೈಕಿ ಕೆಲವು ವಿಚಾರಗಳಿಗೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಆದರೆ, ಅಮೆರಿಕದ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಅಮೆರಿಕ ವಿಫಲವಾಗಿದ್ದು, ಇದೀಗ ಕಳ್ಳಸಾಗಣೆಯ ಮಾರ್ಗವನ್ನು ಆಶ್ರಯಿಸಿದೆ ಎಂದು ಅವರು ವಾಷಿಂಗ್ಟನ್ ವಿರುದ್ಧ ಆರೋಪಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವಲ್ಲಿ ಅಮೆರಿಕದ ನೌಕಾಪಡೆ ವಿಫಲವಾಗಿದೆ. ಅಮೆರಿಕದ ಸೇನೆ ಹಿಂದೆಂದೂ ಇಷ್ಟು ಮುಜುಗರದ ಪರಿಸ್ಥಿತಿಗೆ ಸಿಲುಕಿರಲಿಲ್ಲ ಎಂದು ರೆಜಾಯಿ ಟೀಕಿಸಿದ್ದಾರೆ.
ತನ್ನ ಬೇಡಿಕೆಗಳನ್ನು ಅಮೆರಿಕ ಒಪ್ಪಿಕೊಂಡರೆ ಏಳು ದಿನಗಳೊಳಗೆ ಸಾಮಾನ್ಯ ಹಡಗು ಸಂಚಾರವನ್ನು ಪುನರಾರಂಭಿಸುವುದಾಗಿ ಇರಾನ್ ಪ್ರಸ್ತಾಪಿಸಿದೆ. ಇದಕ್ಕೆ ಅಮೆರಿಕವು ಕತಾರ್‌ನ ಮಧ್ಯಸ್ಥಗಾರರ ಮೂಲಕ ಪ್ರತಿಕ್ರಿಯೆ ನೀಡಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.