
ಕೋಲಾರ, 12 ಅಕ್ಟೋಬರ್ (ಹಿ.ಸ) :
ರಾಜ್ಯದಲ್ಲಿನ ಸರ್ಕಾರದ ಬೆಳವಣಿಗೆಗಳು ನಾಟಕದಂತಿವೆ. ಈ ನಾಟಕಕ್ಕೆ ಪ್ರಶಸ್ತಿ ನೀಡುವುದಾದರೆ ದೇಶದ ಎಲ್ಲ ಪ್ರಶಸ್ತಿಗಳನ್ನೂ ಮೀರಿಸುವ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಿಗೆ ನೀಡಬೇಕು. ಅವರು ಆಸ್ಕರ್ ಪ್ರಶಸ್ತಿಗೆ ಯೋಗ್ಯರು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ ಅವರು, ಚುನಾವಣಾ ಆಯೋಗದ ಕಾರ್ಯವೈಖರಿ ಸರಿಯಿಲ್ಲ ಎನ್ನುವುದಾದರೆ, ಇದೇ ವ್ಯವಸ್ಥೆಯಡಿ ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಜಾರ್ಖಂಡ್‌ನಲ್ಲಿ ಎರಡನೇ ಬಾರಿಗೆ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಧಿಕಾರವನ್ನು ಹೇಗೆ ಹಿಡಿದಿದ್ದೀರಿ ಎಂದು ಪ್ರಶ್ನಿಸಿದರು.
ಚುನಾವಣಾ ವ್ಯವಸ್ಥೆ ಸರಿಯಿಲ್ಲ ಎಂದಾದರೆ ಮೊದಲು ರಾಜೀನಾಮೆ ನೀಡಿ ಪ್ರಶ್ನಿಸಬೇಕು. ಹಿಂದೆ ಚುನಾವಣೆಗಳ ಸಂದರ್ಭದಲ್ಲಿ ಹತ್ತಾರು ಕೊಲೆಗಳು, ದೊಂಬಿಗಳು ನಡೆಯುತ್ತಿದ್ದವು. ಮರುಚುನಾವಣೆ ಸಾಮಾನ್ಯವಾಗಿತ್ತು. ಈಗ ಅಂತಹ ಘಟನೆಗಳಿಗೆ ಅವಕಾಶವಿಲ್ಲದಂತೆ ಚುನಾವಣೆ ನಡೆಸುತ್ತಿರುವ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಪ್ರಾಮಾಣಿಕವಾಗಿ ಚುನಾವಣೆ ನಡೆಸುವುದೇ ಅಪರಾಧವೇ? ಅಕ್ರಮಗಳಿಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ಕೇಳುತ್ತಿದ್ದೀರಾ ಎಂದು ಕಿಡಿಕಾರಿದರು.
ಈ ಚುನಾವಣೆ ರಾಜಕೀಯ ಸಂದೇಶ ನೀಡಬೇಕು. ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧದ ಅಪಪ್ರಚಾರ ಹಾಗೂ ಪ್ರಜಾಪ್ರಭುತ್ವದ ಮೇಲಿನ ಪರೋಕ್ಷ ದಾಳಿಯನ್ನು ತಡೆಯಲು ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ನಮೂನೆ-7 ಸಲ್ಲಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮೂನೆ-7 ಸಲ್ಲಿಸಿದ ತಕ್ಷಣ ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗುತ್ತದೆಯೇ ಎಂದು ಪ್ರಶ್ನಿಸಿದರು. ಅರ್ಜಿಗಳ ಪರಿಶೀಲನೆಯ ಜವಾಬ್ದಾರಿ ಮತಗಟ್ಟೆ ಮಟ್ಟದ ಅಧಿಕಾರಿಗಳದ್ದಾಗಿದೆ. ಅವರು ಬಿಜೆಪಿ ಕಾರ್ಯಕರ್ತರಲ್ಲ ಎಂದರು.
ನ್ಯಾಯಾಲಯದ ಉದಾಹರಣೆ ನೀಡಿದ ಅವರು, ಇಬ್ಬರು ಕಕ್ಷಿದಾರರ ಪರವಾಗಿ ಇಬ್ಬರು ವಕೀಲರು ವಾದ ಮಂಡಿಸುತ್ತಾರೆ. ಆದರೆ, ತೀರ್ಪು ನೀಡುವ ಜವಾಬ್ದಾರಿ ನ್ಯಾಯಾಧೀಶರದ್ದಾಗಿರುತ್ತದೆ. ಅದೇ ರೀತಿ, ಮತದಾರರ ಪಟ್ಟಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಮತಗಟ್ಟೆ ಮಟ್ಟದ ಅಧಿಕಾರಿಗಳದ್ದಾಗಿದೆ ಎಂದು ತಿಳಿಸಿದರು.
ನಮೂನೆ-7 ಅರ್ಜಿಗಳನ್ನು ಸಲ್ಲಿಸುವುದೇ ಅಪರಾಧವಲ್ಲ. ಸಾಮಾನ್ಯ ಹೆಸರುಗಳ ಆಧಾರದ ಮೇಲೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಿ, ಒಂದೇ ಹೆಸರಿರುವವರ ವಿವರಗಳನ್ನು ಪರಿಶೀಲನೆಗಾಗಿ ನೀಡಲಾಗಿದೆ. ಒಬ್ಬರ ಹೆಸರು ಒಂದಕ್ಕಿಂತ ಹೆಚ್ಚು ಕಡೆ ಇರುವುದೇ ಅಥವಾ ಹೊಸದಾಗಿ ಬಂದವರು ಮತದಾರರ ಪಟ್ಟಿಯಲ್ಲಿ ಸೇರಿರುವುದೇ ಎಂಬುದನ್ನು ಪರಿಶೀಲಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಆಗ್ನೇಯ ಪದವೀಧರರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಮೈತ್ರಿಕೂಟದ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ವಿದ್ಯಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಎನ್‌ಡಿಎ ಮೈತ್ರಿಕೂಟದಿಂದ ವಿಶ್ವಾಸ ಹೆಚ್ಚಾಗಿದೆ. ಸುರೇಶ್ ಅವರು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರ ಸಭೆಯಲ್ಲಿ ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್. ಮುನಿಸ್ವಾಮಿ, ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ತೂಪಲ್ಲಿ ಆರ್. ಚೌಡರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಸಿಎಂಆರ್ ಶ್ರೀನಾಥ್, ಕೆಂಬೋಡಿ ನಾರಾಯಣಸ್ವಾಮಿ ಮತ್ತು ಮಾಗೇರಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್