
ಬೆಂಗಳೂರು, 11 ಅಕ್ಟೋಬರ್ (ಹಿ.ಸ.):
ರಾಜ್ಯದ ಹತ್ತು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದ್ದು, ಸಿಡಿ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಾಹಿತಿ ಇದೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕೇವಲ ಆರೋಪಗಳನ್ನು ಮಾಡುವ ಬದಲು ಕೂಡಲೇ ಎಫ್ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವ ಬಗ್ಗೆ ಸ್ವತಃ ಸರ್ಕಾರದ ಪ್ರಮುಖ ನಾಯಕರೇ ಹೇಳಿಕೆ ನೀಡಿರುವುದರಿಂದ ಇಡೀ ಸಚಿವ ಸಂಪುಟದ ಕಾರ್ಯವೈಖರಿ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ ಎಂದು ಟೀಕಿಸಿದ್ದಾರೆ.
“ಮುಖ್ಯಮಂತ್ರಿಗಳೇ, ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಕೂಡಲೇ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ. ಸ್ಟಿಂಗ್ ಆಪರೇಷನ್ ಮಾಡಿದವರು ಯಾರು? ಅವರು ಕರ್ನಾಟಕದವರೇ ಅಥವಾ ಹೊರರಾಜ್ಯದವರೇ? ಈ ಕಾರ್ಯಾಚರಣೆಗೆ ಎಷ್ಟು ಹಣ ಖರ್ಚಾಗಿದೆ? ಎಂಬ ಎಲ್ಲ ಸಂಗತಿಗಳು ತನಿಖೆಯಿಂದ ಬಹಿರಂಗವಾಗಬೇಕು” ಎಂದು ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವ ಬಗ್ಗೆ ಹೇಳಿಕೆಗಳು ಹೊರಬಂದಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಗೌರವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವರು ತಮ್ಮ ಸ್ಥಾನದಲ್ಲಿ ಮುಂದುವರಿಯಬೇಕೇ ಅಥವಾ ರಾಜೀನಾಮೆ ನೀಡಬೇಕೇ ಎಂಬ ಗೊಂದಲ ಜನರಲ್ಲಿ ಮೂಡಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆ ಹೊರತರಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಸುಮ್ಮನೆ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ, ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಕಾನೂನುಬದ್ಧ ತನಿಖೆ ನಡೆಸಬೇಕು. ಎಫ್ಐಆರ್ ದಾಖಲಿಸಲು ಸರ್ಕಾರ ಮುಂದಾಗದಿದ್ದರೆ, ಮುಖ್ಯಮಂತ್ರಿ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ ಎಂಬುದು ಸ್ಪಷ್ಟವಾಗಲಿದೆ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಮೌನಕ್ಕೆ ಆರ್.ಅಶೋಕ್ ಟೀಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡ ಬಳಿಕ ಮೌನಕ್ಕೆ ಶರಣಾಗಿದ್ದಾರೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಹಿಂದಿನ ವಿಧಾನಮಂಡಲ ಅಧಿವೇಶನದಲ್ಲಿಯೂ ಅವರು ಮೌನವಾಗಿದ್ದರು. ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಅವರು ಸ್ಪಷ್ಟವಾಗಿ ಮಾತನಾಡಿ, ಜನರಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಜನರಲ್ಲಿ ಅವರ ಬಗ್ಗೆ ಅಪಾರ ಗೌರವವಿದೆ. ಇಂತಹ ಸಂದರ್ಭದಲ್ಲಿ ಅವರು ಮೌನ ಮುರಿದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆರ್.ಅಶೋಕ್ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R