ಮೃತದೇಹ ಹಸ್ತಾಂತರಕ್ಕೆ ಬಿಲ್ ಪಾವತಿ ಕಡ್ಡಾಯವಲ್ಲ: ಖಾಸಗಿ ಆಸ್ಪತ್ರೆಗಳಿಗೆ ಖಾದರ್ ಎಚ್ಚರಿಕೆ
ಚಿಕಿತ್ಸಾ ವೆಚ್ಚದ ಬಿಲ್ ಪಾವತಿಸಿಲ್ಲವೆಂದು ಮೃತದೇಹ ಹಸ್ತಾಂತರಿಸದೆ ಸತಾಯಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.
khader-body-handover-warning


ಬೆಂಗಳೂರು, 11 ಅಕ್ಟೋಬರ್ (ಹಿ.ಸ):

ಚಿಕಿತ್ಸಾ ವೆಚ್ಚದ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ ಸತಾಯಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಮೃತಪಟ್ಟ ಬಳಿಕ ಬಾಕಿ ಬಿಲ್ ಪಾವತಿಸಿದರೆ ಮಾತ್ರ ಮೃತದೇಹ ನೀಡುವುದಾಗಿ ಒತ್ತಾಯಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಸಂಬಂಧ ಕಾನೂನಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕುರಿತು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಕುರಿತು ಮಾತನಾಡಿದ ಸಚಿವ ಯು.ಟಿ. ಖಾದರ್, ಈ ಹಿಂದೆ 2007 ಮತ್ತು 2018ರಲ್ಲಿ ಈ ಸಂಬಂಧ ಕಾನೂನು ರೂಪಿಸಲಾಗಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.

ಬಾಕಿ ಮೊತ್ತ ಪಾವತಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಆತಂಕದಿಂದ ಕುಟುಂಬಸ್ಥರು ಸಾಲ ಮಾಡಿ ಹಣ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈಗಿನ ನಿಯಮಗಳಲ್ಲಿ ಅಗತ್ಯ ಬದಲಾವಣೆ ತರಬೇಕಿದೆ ಎಂದು ತಿಳಿಸಿದ್ದಾರೆ.

“ಹಣಕ್ಕಾಗಿ ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ಕುಟುಂಬಸ್ಥರನ್ನು ಸತಾಯಿಸುವುದನ್ನು ಸಹಿಸುವುದಿಲ್ಲ. ಈ ರೀತಿಯ ಪ್ರಕರಣಗಳನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ.

ಈ ವಿಚಾರದಲ್ಲಿ ಶೇ.100ರಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಹೇಳಿದ್ದಾರೆ.

ಹೊಸ ನಿಯಮಾವಳಿಗಳನ್ನು ರೂಪಿಸುವ ಮೊದಲು ಖಾಸಗಿ ಆಸ್ಪತ್ರೆಗಳ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ, ಎಲ್ಲ ಅಂಶಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾನೂನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷೆ ಡಾ. ಶೋಭಾ ಪ್ರಕಾಶ್ ಅವರು ಸರ್ಕಾರದ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿದ್ದು, ತೀವ್ರ ನಿಗಾ ಘಟಕದ ಚಿಕಿತ್ಸೆ, ಔಷಧಗಳು ಹಾಗೂ ವೈದ್ಯಕೀಯ ಪರಿಕರಗಳಿಗೆ ಹೆಚ್ಚಿನ ವೆಚ್ಚವಾಗುತ್ತದೆ.

ಹೀಗಾಗಿ ಬಿಲ್ ಪಾವತಿ ಮತ್ತು ಮೃತದೇಹ ಹಸ್ತಾಂತರದ ವಿಚಾರದಲ್ಲಿ ಆಸ್ಪತ್ರೆಗಳ ಸಮಸ್ಯೆಗಳನ್ನೂ ಪರಿಗಣಿಸಿ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande