ಭಾರತ, ಇಸ್ರೇಲ್ ಮಾತ್ರವಲ್ಲ, ಇಡೀ ಮಾನವಕುಲದ ಹೀರೋ ಸ್ಮಿತ್ ಮಚ್ಚಾರ್: ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್
ಜೆರುಸಲೆಮ್ಗೆ ಆಹ್ವಾನಿಸಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವುದಾಗಿ ಘೋಷಣೆ
israel-president-praises-smit-machchhar-as-hero-invites-him-to-jerusalem


ಜೆರುಸಲೆಮ್, 11 ಅಕ್ಟೋಬರ್ (ಹಿ.ಸ.):

ಭಾರತೀಯ ವಿಮಾನ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯ ಮತ್ತು ಸಾಹಸಕ್ಕೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನೀವು ಭಾರತ, ಇಸ್ರೇಲ್ ಹಾಗೂ ಇಡೀ ಮಾನವಕುಲದ ಹೀರೋ. ನಿಮ್ಮ ಆರೋಗ್ಯ ಸುಧಾರಿಸಿದ ಬಳಿಕ ಜೆರುಸಲೆಮ್ನಲ್ಲಿ ನಿಮ್ಮನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿದ ಮಚ್ಚಾರ್ ಅವರಿಗೆ ಇಸ್ರೇಲ್ನ ಅತ್ಯುನ್ನತ ನಾಗರಿಕ ಶೌರ್ಯ ಗೌರವವಾದ ಪ್ರೆಸಿಡೆನ್ಷಿಯಲ್ ಅವಾರ್ಡ್ ಫಾರ್ ಸಿವಿಲಿಯನ್ ಹೀರೋಯಿಸಂ ಪ್ರದಾನ ಮಾಡುವುದಾಗಿ ಅಧ್ಯಕ್ಷ ಹೆರ್ಜೋಗ್ ತಿಳಿಸಿದ್ದಾರೆ.

ಗಾಯಗಳಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಸ್ವತಃ ಪ್ರಶಸ್ತಿ ಪ್ರದಾನ ಮಾಡುವುದಾಗಿ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಮಾನದಲ್ಲಿ ನಡೆದಿದ್ದೇನು?ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವಿವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಎಫ್ಝಡ್ 1073ರಲ್ಲಿ ಸಹಪೈಲಟ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆದಿತ್ತು. ವಿಮಾನವನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು.

ತೀವ್ರವಾಗಿ ಗಾಯಗೊಂಡಿದ್ದರೂ ಮಚ್ಚಾರ್ ಅವರು ಕಾಕ್ಪಿಟ್ನ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಮಧ್ಯಪ್ರವೇಶಿಸಿ ಆರೋಪಿಯನ್ನು ನಿಯಂತ್ರಿಸಲು ಸಾಧ್ಯವಾಯಿತು.

ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದರು. ಈ ಘಟನೆಯಲ್ಲಿ ಮಚ್ಚಾರ್ ಅವರ ಧೈರ್ಯ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ಇಸ್ರೇಲ್ ಅಧ್ಯಕ್ಷರು ಶ್ಲಾಘಿಸಿದ್ದಾರೆ.

ಭಾರತ-ಇಸ್ರೇಲ್ ಸ್ನೇಹಕ್ಕೆ ಮತ್ತಷ್ಟು ಬಲಮಚ್ಚಾರ್ ಅವರಿಗೆ ಬರೆದ ಪತ್ರದಲ್ಲಿ ಹೆರ್ಜೋಗ್ ಅವರು ಒಂದು ಶತಮಾನಕ್ಕೂ ಹಿಂದೆ ಪವಿತ್ರ ಭೂಮಿಯ ನಗರಗಳ ವಿಮೋಚನೆಗಾಗಿ ಹೋರಾಡಿದ್ದ ಭಾರತೀಯ ಸೈನಿಕರ ಸಾಹಸವನ್ನೂ ಸ್ಮರಿಸಿದ್ದಾರೆ.

ಮಚ್ಚಾರ್ ಅವರ ಶೌರ್ಯವು ಭಾರತ ಮತ್ತು ಇಸ್ರೇಲ್ ನಡುವಿನ ಐತಿಹಾಸಿಕ ಸ್ನೇಹ ಹಾಗೂ ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಚ್ಚಾರ್ ಅವರು ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದು, ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಇಸ್ರೇಲ್ ಅಧ್ಯಕ್ಷರು ಹಾರೈಸಿದ್ದಾರೆ.

ಆರು ಇಸ್ರೇಲಿ ನಾಗರಿಕರಿಗೂ ಇದೇ ಘಟನೆಯಲ್ಲಿ ತೋರಿದ ಧೈರ್ಯಕ್ಕಾಗಿ ನಾಗರಿಕ ಶೌರ್ಯ ಪ್ರಶಸ್ತಿ ಘೋಷಿಸಿಲಾಗಿದೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande