ಗೃಹಜ್ಯೋತಿ ಪರಿಶೀಲನೆಗೆ ಅಕ್ಟೋಬರ್ 31ರವರೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಹಾಗೂ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಅಕ್ಟೋಬರ್ 31ರವರೆಗೆ ಗಡುವು ವಿಸ್ತರಿಸಿದೆ.
gruha-jyothi-verification-deadline-extended-october-31


ಬೆಂಗಳೂರು, 11 ಅಕ್ಟೋಬರ್ (ಹಿ.ಸ.):

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಹಾಗೂ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು ಅಕ್ಟೋಬರ್ 31ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ಈ ಕುರಿತು ಇಂಧನ ಇಲಾಖೆಯು ಆದೇಶ ಹೊರಡಿಸಿದ್ದು, ವಿದ್ಯುತ್ ಸರಬರಾಜು ಕಂಪನಿಗಳ ಮನವಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 1ರಿಂದ ಆರಂಭಗೊಂಡಿರುವ ಪರಿಶೀಲನಾ ಪ್ರಕ್ರಿಯೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಈ ಹಿಂದೆ ಕಾಲಾವಕಾಶ ನೀಡಲಾಗಿತ್ತು.

ಆದರೆ, ಕೆಲವು ವಿದ್ಯುತ್ ಸಂಪರ್ಕಗಳ ಫಲಾನುಭವಿಗಳ ವಿವರ ಸಂಗ್ರಹಣೆ ಹಾಗೂ ದಾಖಲೆಗಳ ನವೀಕರಣ ಬಾಕಿ ಉಳಿದಿರುವುದರಿಂದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

ಮನೆ ಮಾಲೀಕರು ಅಥವಾ ಬಾಡಿಗೆದಾರರ ಮರಣ, ಮನೆ ಬದಲಾವಣೆ, ಆಸ್ತಿ ಖರೀದಿ ಅಥವಾ ಮಾರಾಟದ ಬಳಿಕ ದಾಖಲೆಗಳನ್ನು ನವೀಕರಿಸದಿರುವುದು ಸೇರಿದಂತೆ ಹಲವು ಕಾರಣಗಳಿಂದ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಿದೆ.

ಮನೆಗಳಿಗೆ ಬೀಗ ಹಾಕಿರುವುದು, ಫಲಾನುಭವಿಗಳ ಮಾಹಿತಿ ಲಭ್ಯವಾಗದಿರುವುದು ಹಾಗೂ ಮಾಹಿತಿ ನೀಡಲು ನಿರಾಕರಿಸಿರುವ ಪ್ರಕರಣಗಳೂ ಪರಿಶೀಲನೆ ವಿಳಂಬಕ್ಕೆ ಕಾರಣವಾಗಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande