ಬರದಿಂದ ರಾಜ್ಯಕ್ಕೆ ₹60–65 ಸಾವಿರ ಕೋಟಿ ನಷ್ಟದ ಅಂದಾಜು: ಡಾ. ಜಿ. ಪರಮೇಶ್ವರ
ಮೈಸೂರು, 11 ಅಕ್ಟೋಬರ್ (ಹಿ.ಸ.): ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸುಮಾರು ₹60 ಸಾವಿರ ಕೋಟಿಯಿಂದ ₹65 ಸಾವಿರ ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಬರ ನಿರ್ವಹಣೆಗೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ನೆರವು ಒದಗಿಸುತ್ತಿದೆ ಎಂದು ಉಪಮುಖ್ಯಮಂತ್ರಿ
ಬರದಿಂದ ರಾಜ್ಯಕ್ಕೆ ₹60–65 ಸಾವಿರ ಕೋಟಿ ನಷ್ಟದ ಅಂದಾಜು: ಡಾ. ಜಿ. ಪರಮೇಶ್ವರ


ಮೈಸೂರು, 11 ಅಕ್ಟೋಬರ್ (ಹಿ.ಸ.):

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸುಮಾರು ₹60 ಸಾವಿರ ಕೋಟಿಯಿಂದ ₹65 ಸಾವಿರ ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಬರ ನಿರ್ವಹಣೆಗೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ನೆರವು ಒದಗಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ರಾಜ್ಯದ ಬರ ಪರಿಸ್ಥಿತಿ ಕುರಿತು ಈಗಾಗಲೇ ಎರಡು ಮನವಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮನವಿಗಳಲ್ಲಿ ಒಟ್ಟು ₹46 ಸಾವಿರ ಕೋಟಿ ನಷ್ಟವಾಗಿರುವುದಾಗಿ ಅಂದಾಜು ಮಾಡಿ ತಿಳಿಸಲಾಗಿದೆ. ಮುಖ್ಯಮಂತ್ರಿ ಅಂತಿಮ ಮನವಿ ಸಲ್ಲಿಸಲಿದ್ದು, ಪ್ರಸ್ತುತ ಅಂದಾಜಿನ ಪ್ರಕಾರ ನಷ್ಟದ ಮೊತ್ತ ₹60 ಸಾವಿರ ಕೋಟಿಯಿಂದ ₹65 ಸಾವಿರ ಕೋಟಿ ತಲುಪಬಹುದು ಎಂದು ಹೇಳಿದರು.

ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಉಳಿದ 23 ತಾಲೂಕುಗಳ ಪೈಕಿ ಕೆಲವು ತಾಲೂಕುಗಳಲ್ಲಿ ನೆಲಮಟ್ಟದ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು ಹತ್ತು ತಾಲೂಕುಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸುಮಾರು ₹8 ಸಾವಿರ ಕೋಟಿ ನೆರವು ಕೋರಿದೆ. ಕಳೆದ ವರ್ಷ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ₹18 ಸಾವಿರ ಕೋಟಿಯಿಂದ ₹20 ಸಾವಿರ ಕೋಟಿ ನೆರವು ಕೋರಲಾಗಿತ್ತು. ಈ ಬಾರಿಯೂ ಸೂಕ್ತ ಪ್ರಮಾಣದ ನೆರವು ಕೋರಲಾಗುವುದು. ಕೇಂದ್ರ ಸರ್ಕಾರ ಎಷ್ಟು ಪರಿಹಾರ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಬರ ನಿರ್ವಹಣೆಗೆ ರಾಜ್ಯ ಸರ್ಕಾರದಿಂದಲೇ ₹1,250 ಕೋಟಿ ನೆರವು ವಿತರಿಸಲಾಗುತ್ತಿದೆ. ಪ್ರತಿ ರೈತರಿಗೆ ತಲಾ ₹2,500ರಂತೆ ನೆರವು ನೀಡಲಾಗುತ್ತಿದ್ದು, ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ನೆರವು ತಲುಪಿಸುವ ಅಂದಾಜಿನೊಂದಿಗೆ ಯೋಜನೆ ರೂಪಿಸಲಾಗಿದೆ. ಅಂತಿಮವಾಗಿ ಎಷ್ಟು ಕುಟುಂಬಗಳಿಗೆ ನೆರವು ತಲುಪಲಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವು ಹಾಗೂ ಕೂಲಿ ಸೇರಿದಂತೆ ಬರ ಪರಿಸ್ಥಿತಿಯಲ್ಲಿ ಜನರಿಗೆ ಅಗತ್ಯವಿರುವ ನೆರವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರವೂ ಸೂಕ್ತ ಪ್ರಮಾಣದ ಪರಿಹಾರ ನೀಡಬೇಕು ಎಂದು ಡಾ. ಜಿ. ಪರಮೇಶ್ವರ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande