

ನವದೆಹಲಿ, 11 ಅಕ್ಟೋಬರ್ (ಹಿ.ಸ.):
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿಂಗಾಪುರದಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಸಮೂಹ ಮುಖ್ಯ ಕಾರ್ಯನಿರ್ವಾಹಕ ಬಿಲ್ ವಿಂಟರ್ಸ್ ಹಾಗೂ ಬ್ಯಾಂಕಿನ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಭಾರತದ ಜಾಗತಿಕ ಮಾರುಕಟ್ಟೆ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ ಹಣಕಾಸು, ಗಡಿಯಾಚೆಗಿನ ಬ್ಯಾಂಕಿಂಗ್ ಸೇವೆಗಳು ಮತ್ತು ಹಣಕಾಸು ಹರಿವನ್ನು ಬಲಪಡಿಸುವ ಪ್ರಮುಖ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ.
ಜಾಗತಿಕ ಮಾರುಕಟ್ಟೆಗಳೊಂದಿಗೆ ಭಾರತದ ಹೆಚ್ಚುತ್ತಿರುವ ಆರ್ಥಿಕ ಸಂಪರ್ಕಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸೂಕ್ತ ತೆರಿಗೆ ಮತ್ತು ನಿಯಂತ್ರಣ ಚೌಕಟ್ಟಿನ ಮೂಲಕ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ವ್ಯಾಪಕಗೊಳಿಸುವ ಬಗ್ಗೆಯೂ ಚರ್ಚೆ ನಡೆಯಿತು. ಅಲ್ಲದೆ, ಗುಜರಾತ್‌ನ ಗಿಫ್ಟ್ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ ಖಜಾನೆ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಈಗಿರುವ ಕೇಂದ್ರಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಅವಕಾಶಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಸಮೂಹ ಮುಖ್ಯ ಕಾರ್ಯಾಚರಣೆ ಅಧಿಕಾರಿ ತನುಜಾ ಕಪಿಲಾಶ್ರಮಿ, ಸಿಂಗಾಪುರ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಪ್ಯಾಟ್ರಿಕ್ ಲೀ ಹಾಗೂ ಸಮೂಹದ ಸಾರ್ವಜನಿಕ ಮತ್ತು ನಿಯಂತ್ರಣ ವ್ಯವಹಾರಗಳ ವಿಭಾಗದ ಸರ್ಕಾರಿ ವ್ಯವಹಾರಗಳ ನಿರ್ದೇಶಕ ಕಾಲಿನ್ ತುಂಗ್ ಉಪಸ್ಥಿತರಿದ್ದರು.
ಮೂರು ದಿನಗಳ ಅಧಿಕೃತ ಪ್ರವಾಸ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 9ರಿಂದ 11ರವರೆಗೆ ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. ಭಾರತ ಮತ್ತು ಸಿಂಗಾಪುರ ನಡುವಿನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಭಾರತದಲ್ಲಿ ಜಾಗತಿಕ ಸಾಂಸ್ಥಿಕ ಹೂಡಿಕೆಯನ್ನು ಆಕರ್ಷಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.