
ಮೈಸೂರು, 11 ಅಕ್ಟೋಬರ್ (ಹಿ.ಸ.):
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಪ್ರತಿಯೊಬ್ಬ ನಾಗರಿಕರ ಹಕ್ಕು. ಈ ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು. ಎಲ್ಲವನ್ನು ಉಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಸಂಕಲ್ಪ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಮೈಸೂರಿನ ಕುಪ್ಪಣ್ಣ ಪಾರ್ಕ್ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಅವರು,
ಈಗಾಗಲೇ ಕೆಲವರು ದೇಶದ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ದೊಡ್ಡ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ ಎನ್ನುವುದು ದೇಶದ ಪ್ರತಿಯೊಬ್ಬ ಪ್ರಜೆಯ ಅರಿವಿಗೆ ಬಂದಿದೆ. ಹೀಗಾಗಿ ದೇಶಕ್ಕೆ ದೇಶವೇ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ಈ ಹೋರಾಟ ಕಾಂಗ್ರೆಸ್ ಪಕ್ಷದ್ದು, ಸರ್ಕಾರದ್ದು ಅಂತಲ್ಲ. ನಮ್ಮದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹಾಗೂ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸಿದ ಪಕ್ಷ. ಹೀಗಾಗಿ, ದೇಶದ ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದೇ ಭಾವಿಸಿದ್ದೇವೆ ಎಂದರು.
ಪ್ರಜಾಪ್ರಭುತ್ವದ ಮೂಲ ಭಾರತ. ಪ್ರಜಾಪ್ರಭುತ್ವಕ್ಕೆ ನಾಲ್ಕು ಸ್ತಂಭಗಳು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕೆ- ಮಾಧ್ಯಮ. ಈ ಆಧಾರ ಸ್ತಂಭಗಳನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಹಿಂದೆ ರಾಜರಿದ್ದರು. ಈಗ ನಾವು ಜನರ ಪ್ರತಿನಿಧಿಗಳಾಗಿದ್ದೇವೆ. ಈಗಾಗಲೇ 150 ಕ್ಕೂ ಹೆಚ್ಚು ನಿವೃತ್ತ ಐಎಎಸ್ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮೊನ್ನೆಯಿಂದಲೇ ದೆಹಲಿಗೆ ಯಾರೂ ಕೂಡ ಕಾಲಿಡಬಾರದು ಎಂದು ಎಲ್ಲಾ ರೀತಿಯಿಂದಲೂ ನಿರ್ಬಂಧ ಹೇರಲಾಗಿದೆ. ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ, ಸೋಮವಾರದಂದು ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು, ಸಂಸತ್ ಸದಸ್ಯರು, ಸಚಿವರು, ಶಾಸಕರು ಎಲ್ಲರೂ ಸೇರಿ ಹೋರಾಟ ಹಮ್ಮಿಕೊಡಿದ್ದೇವೆ. ಅದರಲ್ಲಿ ನಾನೂ ಕೂಡ ಪಾಲ್ಗೊಳ್ಳಲಿದ್ದೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.