ರಿಯಾದ್ ವಿಮಾನ ನಿಲ್ದಾಣದ ಮೇಲೆ ಉಗ್ರರ ದಾಳಿ: ಅಮೆರಿಕದ ಪ್ರಜೆ ಸೇರಿ 12 ಮಂದಿ ಸಾವು, 309 ಜನರಿಗೆ ಗಾಯ
ರಿಯಾದ್ (ಸೌದಿ ಅರೇಬಿಯಾ), 11 ಅಕ್ಟೋಬರ್ (ಹಿ.ಸ.): ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶನಿವಾರ ನಡೆದ ದಾಳಿಯಲ್ಲಿ ಅಮೆರಿಕದ ಪ್ರಜೆ ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 309 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ
रियाद एयरपोर्ट पर  हमले के बाद आग लग गई। फोटो -  इंटरनेट मीडिया


ರಿಯಾದ್ (ಸೌದಿ ಅರೇಬಿಯಾ), 11 ಅಕ್ಟೋಬರ್ (ಹಿ.ಸ.):

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶನಿವಾರ ನಡೆದ ದಾಳಿಯಲ್ಲಿ ಅಮೆರಿಕದ ಪ್ರಜೆ ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 309 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಸಾಮಾನ್ಯ ಪ್ರಾಧಿಕಾರ ತಿಳಿಸಿದೆ.

ಮೃತರಲ್ಲಿ ಸೌದಿ ಅರೇಬಿಯಾದ ನಾಲ್ವರು, ಬಾಂಗ್ಲಾದೇಶದ ಇಬ್ಬರು ಹಾಗೂ ಈಜಿಪ್ಟ್, ಜೋರ್ಡಾನ್, ಸಿರಿಯಾ, ಪ್ಯಾಲೆಸ್ತೀನ್ ಮತ್ತು ಸುಡಾನ್‌ನ ತಲಾ ಒಬ್ಬರು ಸೇರಿದ್ದಾರೆ. ಉಳಿದವರ ರಾಷ್ಟ್ರೀಯತೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ದಾಳಿಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ. ಹಾನಿಯ ಪ್ರಮಾಣವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಗಲ್ಫ್ ನ್ಯೂಸ್ ಮತ್ತು ಸಿಬಿಎಸ್ ನ್ಯೂಸ್ ವರದಿ ಮಾಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಯಾವುದಾದರೂ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ, ಸೌದಿ ಅರೇಬಿಯಾದ ಮೇಲೆ ಹೌತಿಗಳ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸುತ್ತದೆ. ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಅಮೆರಿಕದ ಪ್ರಜೆ ಸೇರಿದಂತೆ ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಟ್ರಂಪ್ ಆಡಳಿತವು ಸೌದಿ ಅರೇಬಿಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ದಾಳಿಯ ಹೊಣೆ ಹೊತ್ತಿಲ್ಲ ಹೌತಿಗಳು

ಇರಾನ್ ಬೆಂಬಲಿತ ಹೌತಿ ಉಗ್ರಗಾಮಿ ಸಂಘಟನೆ ಶನಿವಾರದ ದಾಳಿಯ ಹೊಣೆಯನ್ನು ಈವರೆಗೆ ಹೊತ್ತುಕೊಂಡಿಲ್ಲ. ಆದರೆ, ಈ ವಾರದ ಆರಂಭದಲ್ಲಿ ಇದೇ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವುದಾಗಿ ಸಂಘಟನೆ ಹೇಳಿಕೊಂಡಿತ್ತು. ಆ ದಾಳಿಯಲ್ಲಿ ಓರ್ವ ಪೈಲಟ್ ಸೇರಿದಂತೆ ಮೂವರು ಸೌದಿ ಪ್ರಜೆಗಳು ಮೃತಪಟ್ಟಿದ್ದರು.

ಶನಿವಾರದ ದಾಳಿಯಲ್ಲಿ ದೇಶೀಯ ವಿಮಾನಗಳಿಗಾಗಿ ಬಳಸುವ ಮೂರನೇ ಮತ್ತು ನಾಲ್ಕನೇ ಟರ್ಮಿನಲ್‌ಗಳಿರುವ ಸಂಕೀರ್ಣದ ಮೇಲೆ ಕ್ಷಿಪಣಿ ಅಪ್ಪಳಿಸಿದೆ ಎಂದು ವರದಿಯಾಗಿದೆ. ಯೆಮನ್‌ನಲ್ಲಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಹಾನ್ಸ್ ಗ್ರಂಡ್‌ಬರ್ಗ್ ಈ ದಾಳಿಯನ್ನು ಪ್ರಾದೇಶಿಕ ಭದ್ರತೆಗೆ ಗಂಭೀರ ಬೆದರಿಕೆ ಎಂದು ಬಣ್ಣಿಸಿದ್ದಾರೆ.

ವಿಮಾನಗಳ ಮಾರ್ಗ ಬದಲಾವಣೆ

ದಾಳಿಯ ಬಳಿಕ ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದ್ದು, ಹಲವು ವಿಮಾನಗಳನ್ನು ಪರ್ಯಾಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ವಿಮಾನ ಸಂಚಾರದ ಮಾಹಿತಿ ಒದಗಿಸುವ ಫ್ಲೈಟ್‌ರಾಡಾರ್24 ತಿಳಿಸಿದೆ.

ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರಿಗೆ ವಿಮಾನ ನಿಲ್ದಾಣದಿಂದ ದೂರವಿರುವಂತೆ ಎಚ್ಚರಿಕೆ ನೀಡಿವೆ.

ಭಾನುವಾರ ನಡೆಯಲಿರುವ ಪ್ರಮುಖ ಅಂತಾರಾಷ್ಟ್ರೀಯ ಇಂಧನ ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ವಿಮಾನಗಳ ಸಂಚಾರದ ಮಾಹಿತಿ ಒದಗಿಸುವ ಫ್ಲೈಟ್‌ಅವೇರ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಿಯಾದ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ 291 ವಿಮಾನಗಳ ಹಾರಾಟ ರದ್ದುಗೊಂಡಿದೆ. ದಾಳಿಗೂ ಮುನ್ನವೇ ಏರ್ ಇಂಡಿಯಾ, ಫ್ಲೈದುಬೈ, ಲುಫ್ತಾನ್ಸಾ ಸಮೂಹ ಮತ್ತು ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ರಿಯಾದ್ ಹಾಗೂ ಸೌದಿ ಅರೇಬಿಯಾದ ಇತರ ವಿಮಾನ ನಿಲ್ದಾಣಗಳಿಗೆ ಸಂಚರಿಸುವ ವಿಮಾನಗಳ ಹಾರಾಟವನ್ನು ವಿವಿಧ ಅವಧಿಗೆ ಸ್ಥಗಿತಗೊಳಿಸಿದ್ದವು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande