ಮಹಡಿ ಮನೆ ಇಲ್ಲದ ಅಪರೂಪದ ಗ್ರಾಮ
ಗದಗ, 11 ಅಕ್ಟೋಬರ್ (ಹಿ.ಸ.) ಆಧುನಿಕ ಯುಗದಲ್ಲಿ ವಿಶಾಲವಾದ, ಸುಂದರವಾದ ಹಾಗೂ ಹೈಟೆಕ್ ಮನೆ ನಿರ್ಮಿಸಿಕೊಳ್ಳುವುದು ಬಹುತೇಕರ ಕನಸು. ಆದರೆ, ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಮಾತ್ರ ಮಹಡಿ ಮನೆ ನಿರ್ಮಿಸುವುದು ಇಂದಿಗೂ ನಿಷಿದ್ಧ ಎಂಬ ನಂಬಿಕೆ ಇದೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಈ ಗ
ಫೋಟೋ


ಫೋಟೋ


ಗದಗ, 11 ಅಕ್ಟೋಬರ್ (ಹಿ.ಸ.)

ಆಧುನಿಕ ಯುಗದಲ್ಲಿ ವಿಶಾಲವಾದ, ಸುಂದರವಾದ ಹಾಗೂ ಹೈಟೆಕ್ ಮನೆ ನಿರ್ಮಿಸಿಕೊಳ್ಳುವುದು ಬಹುತೇಕರ ಕನಸು. ಆದರೆ, ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಮಾತ್ರ ಮಹಡಿ ಮನೆ ನಿರ್ಮಿಸುವುದು ಇಂದಿಗೂ ನಿಷಿದ್ಧ ಎಂಬ ನಂಬಿಕೆ ಇದೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನೂರಾರು ಮನೆಗಳಿದ್ದರೂ ಒಂದೇ ಒಂದು ಮಹಡಿ ಮನೆ ಕಾಣಸಿಗುವುದಿಲ್ಲ.

ಇದಕ್ಕೆ ಕಾರಣ ಗ್ರಾಮದ ಆರಾಧ್ಯ ದೈವ ಶ್ರೀ ಬೇವಿನ ಮರದ ಸತ್ಯಮ್ಮ ದೇವಿ. ಸತ್ಯಮ್ಮ ದೇವಿಯ ದೇವಸ್ಥಾನಕ್ಕಿಂತ ಎತ್ತರವಾಗಿ ಮನೆ ನಿರ್ಮಿಸಬಾರದು ಎಂಬುದು ಗ್ರಾಮಸ್ಥರ ನಂಬಿಕೆ. ದೇವಸ್ಥಾನಕ್ಕಿಂತ ಎತ್ತರವಾಗಿ ಮನೆ ನಿರ್ಮಿಸಿದರೆ ಆ ಕುಟುಂಬಕ್ಕೆ ಕೇಡು ಸಂಭವಿಸುತ್ತದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ.

ಹಿಂದೆ ಗ್ರಾಮದ ವ್ಯಕ್ತಿಯೊಬ್ಬರು ದೇವಸ್ಥಾನಕ್ಕಿಂತ ಎತ್ತರವಾಗಿ ಮಹಡಿ ಮನೆ ನಿರ್ಮಿಸಿದ್ದರು ಎನ್ನಲಾಗುತ್ತದೆ. ಬಳಿಕ ಆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ನಂತರ ಆ ಮಹಡಿ ಮನೆಯನ್ನು ತೆರವುಗೊಳಿಸಲಾಯಿತು ಎನ್ನಲಾಗಿದೆ. ಈ ಘಟನೆ ಬಳಿಕ ಗ್ರಾಮದಲ್ಲಿ ಮಹಡಿ ಮನೆ ನಿರ್ಮಿಸುವ ವಿಚಾರವನ್ನೇ ಯಾರೂ ಮಾಡುವುದಿಲ್ಲ ಎಂದು ಗ್ರಾಮದ ಹಿರಿಯರಾದ ಭರಪ್ಪ ಹೇಳುತ್ತಾರೆ.

ದೇವಾಲಯಕ್ಕಿಂತ ಎತ್ತರವಾಗದ ಮನೆ

ಗ್ರಾಮದಲ್ಲಿ ಎಷ್ಟೇ ಶ್ರೀಮಂತರಾಗಿದ್ದರೂ, ಮನೆ ನಿರ್ಮಿಸುವಾಗ ದೇವಾಲಯದ ಎತ್ತರವನ್ನು ಮೀರದಂತೆ ನೋಡಿಕೊಳ್ಳುವುದು ವಾಡಿಕೆಯಾಗಿದೆ. ಮನೆ ದೊಡ್ಡದಾಗಿರಲಿ, ಸುಸಜ್ಜಿತವಾಗಿರಲಿ, ಆದರೆ ಗ್ರಾಮ ದೇವತೆಯ ದೇವಸ್ಥಾನಕ್ಕಿಂತ ಎತ್ತರವಾಗಿರಬಾರದು ಎಂಬ ನಂಬಿಕೆಯನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಗ್ರಾಮಸ್ಥ ಬಸವರಾಜ್ ನೀಡಿರುವ ಮಾಹಿತಿ ಪ್ರಕಾರ ಪೂರ್ವಜರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ. ದೇವಿಯ ಮೇಲಿನ ನಂಬಿಕೆಯಿಂದಲೇ ಗ್ರಾಮದಲ್ಲಿ ಮಹಡಿ ಮನೆ ನಿರ್ಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಮನೆಗೊಬ್ಬರು ಸತ್ಯಪ್ಪ, ಸತ್ಯಮ್ಮ

ಹಾತಲಗೇರಿ ಗ್ರಾಮದ ಮತ್ತೊಂದು ವಿಶೇಷತೆ ಎಂದರೆ, ಗ್ರಾಮ ದೇವತೆ ಸತ್ಯಮ್ಮ ದೇವಿಯ ಹೆಸರಿನೊಂದಿಗೆ ಇಲ್ಲಿನ ಜನರಿಗಿರುವ ಭಾವನಾತ್ಮಕ ನಂಟು.

ಗ್ರಾಮದ ಹಲವು ಕುಟುಂಬಗಳಲ್ಲಿ ಸತ್ಯಪ್ಪ, ಸಣ್ಣ ಸತ್ಯಪ್ಪ, ದೊಡ್ಡ ಸತ್ಯಪ್ಪ, ಸತ್ಯಮ್ಮ, ಸಣ್ಣ ಸತ್ಯವ್ವ ಸೇರಿದಂತೆ ದೇವಿಯ ಹೆಸರನ್ನು ಒಳಗೊಂಡ ಹೆಸರುಗಳನ್ನು ಮಕ್ಕಳಿಗೆ ಇಡುವ ಪದ್ಧತಿ ಇದೆ. ಇತ್ತೀಚಿನ ಪೀಳಿಗೆಯಲ್ಲೂ ಸತ್ಯಮ್ಮ ದೇವಿಯ ಹೆಸರಿನೊಂದಿಗೆ ಮಕ್ಕಳಿಗೆ ನಾಮಕರಣ ಮಾಡುವ ಸಂಪ್ರದಾಯ ಮುಂದುವರಿದಿದೆ.

ಇದು ಗ್ರಾಮ ದೇವತೆಯ ಮೇಲಿನ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ ಎಂದು ಗ್ರಾಮಸ್ಥ ನಾಗರಾಜ್ ಹೇಳಿದ್ದಾರೆ.

ಬೇವಿನ ಮರವೂ ದೇವರ ಸ್ವರೂಪ

ಸತ್ಯಮ್ಮ ದೇವಿಯ ಆರಾಧನೆಯಲ್ಲಿ ಬೇವಿನ ಮರಕ್ಕೂ ವಿಶೇಷ ಸ್ಥಾನವಿದೆ. ಸತ್ಯಮ್ಮ ದೇವಿಯು ಬೇವಿನ ಮರದಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಹೀಗಾಗಿ ಗ್ರಾಮದಲ್ಲಿ ಬೇವಿನ ಮರವನ್ನು ಕಡಿಯುವುದಿಲ್ಲ. ಉರುವಲಿಗೂ ಬಳಸುವುದಿಲ್ಲ. ಬದಲಾಗಿ ಬೇವಿನ ಮರವನ್ನು ದೇವರ ಸ್ವರೂಪವೆಂದು ಭಾವಿಸಿ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿನಿತ್ಯ ಬೇವಿನ ಮರಕ್ಕೆ ಪೂಜೆ ಸಲ್ಲಿಸುವ ಪದ್ಧತಿಯೂ ಗ್ರಾಮದಲ್ಲಿದೆ.

ಗ್ರಾಮಸ್ಥ ಹನಮಂತ್ ಅವರ ಪ್ರಕಾರ, ಸತ್ಯಮ್ಮ ದೇವಿಯ ಮೇಲಿನ ನಂಬಿಕೆಯಿಂದ ಬೇವಿನ ಮರವನ್ನು ದೇವರಂತೆ ಪೂಜಿಸಲಾಗುತ್ತಿದೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಗ್ರಾಮಸ್ಥರು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಆಚರಣೆಗಳಿಂದ ಗ್ರಾಮಕ್ಕೆ ಒಳಿತಾಗುತ್ತಿದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

ಆಧುನಿಕತೆಯ ನಡುವೆ ಉಳಿದ ಸಂಪ್ರದಾಯ

ಆಧುನಿಕತೆಯ ವೇಗದಲ್ಲಿ ಹಲವು ಗ್ರಾಮೀಣ ಆಚರಣೆಗಳು ಮತ್ತು ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿವೆ. ಆದರೆ ಹಾತಲಗೇರಿ ಗ್ರಾಮದಲ್ಲಿ ಪೂರ್ವಜರಿಂದ ಬಂದಿರುವ ನಂಬಿಕೆಗಳಿಗೆ ಇಂದಿಗೂ ವಿಶೇಷ ಸ್ಥಾನವಿದೆ.

ಮಹಡಿ ಮನೆ ನಿರ್ಮಿಸದಿರುವುದು, ಸತ್ಯಮ್ಮ ದೇವಿಯ ಹೆಸರಿನಲ್ಲಿ ಮಕ್ಕಳಿಗೆ ನಾಮಕರಣ ಮಾಡುವುದು, ಬೇವಿನ ಮರವನ್ನು ಕಡಿಯದೆ ಪೂಜಿಸುವುದು ಸೇರಿದಂತೆ ಹಲವು ಆಚರಣೆಗಳನ್ನು ಗ್ರಾಮಸ್ಥರು ತಲೆತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.

ಆಧುನಿಕ ಜೀವನಶೈಲಿಯ ನಡುವೆಯೂ ತಮ್ಮ ಗ್ರಾಮ ದೇವತೆಯ ಮೇಲಿನ ನಂಬಿಕೆ ಹಾಗೂ ಪೂರ್ವಜರ ಸಂಪ್ರದಾಯವನ್ನು ಉಳಿಸಿಕೊಂಡಿರುವ ಹಾತಲಗೇರಿ ಗ್ರಾಮ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ.

ಮನೆ ಎಷ್ಟೇ ದೊಡ್ಡದಾಗಿರಲಿ, ಗ್ರಾಮ ದೇವತೆಯ ಸ್ಥಾನಕ್ಕಿಂತ ದೊಡ್ಡದಾಗಬಾರದು ಎಂಬ ನಂಬಿಕೆಯೇ ಈ ಗ್ರಾಮದ ವಿಶೇಷತೆ. ನೂರಾರು ಮನೆಗಳಿದ್ದರೂ ಒಂದೇ ಒಂದು ಮಹಡಿ ಮನೆ ಇಲ್ಲದಿರುವ ಹಾತಲಗೇರಿ, ಆಧುನಿಕತೆಯ ನಡುವೆಯೂ ತನ್ನ ಶತಮಾನಗಳ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡಿರುವ ಅಪರೂಪದ ಗ್ರಾಮವಾಗಿ ಗಮನ ಸೆಳೆಯುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande