ಹೈಕೋರ್ಟ್ ಆದೇಶದಂತೆ ದಿನಗೂಲಿ ನೌಕರರಿಗೆ ಸೌಲಭ್ಯ ಕಲ್ಪಿಸಿ: ಸಂಜಯ ಜೋಶಿ
ವಿಜಯಪುರ, 11 ಅಕ್ಟೋಬರ್ (ಹಿ.ಸ.) ಕರ್ನಾಟಕ ರಾಜ್ಯ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕದಡಿ ನೇಮಕಗೊಂಡಿರುವ ದಿನಗೂಲಿ ನೌಕರರಿಗೆ ಹೈಕೋರ್ಟ್ ಆದೇಶದಂತೆ ತಕ್ಷಣವೇ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನೌಕರರ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸು
Aagrah


ವಿಜಯಪುರ, 11 ಅಕ್ಟೋಬರ್ (ಹಿ.ಸ.)

ಕರ್ನಾಟಕ ರಾಜ್ಯ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕದಡಿ ನೇಮಕಗೊಂಡಿರುವ ದಿನಗೂಲಿ ನೌಕರರಿಗೆ ಹೈಕೋರ್ಟ್ ಆದೇಶದಂತೆ ತಕ್ಷಣವೇ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲ್ಲದೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನೌಕರರ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ಸಂಜಯ ಜೋಶಿ ಸರ್ಕಾರವನ್ನು ಒತ್ತಾಯಿಸಿದರು.

ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಗೂಲಿ ನೌಕರರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಈ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸಿ, ನೌಕರರು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ದಿನಗೂಲಿ ನೌಕರರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಅನೇಕ ಸಮಸ್ಯೆ ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮಾನವೀಯ ದೃಷ್ಟಿಕೋನದಿಂದ ನೌಕರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ದುರಂತದ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕ–2022 ಅನ್ನು ಸರ್ಕಾರ ರೂಪಿಸಿದರೂ, ಅದರ ಅನುಷ್ಠಾನದ ಸಂದರ್ಭದಲ್ಲಿ ಡಿ.ಎ., ಎಚ್.ಆರ್.ಎ. ಸೇರಿದಂತೆ ಹಲವು ಸೌಲಭ್ಯಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ನೌಕರರು ತಮ್ಮ ಹಕ್ಕುಗಳಿಗಾಗಿ ಸುದೀರ್ಘ ಕಾನೂನಾತ್ಮಕ ಹೋರಾಟ ನಡೆಸಬೇಕಾಯಿತು ಎಂದು ಸಂಜಯ ಜೋಶಿ ವಿವರಿಸಿದರು.

ಈ ಕಾನೂನು ಹೋರಾಟದ ಭಾಗವಾಗಿ 2026ರ ಫೆಬ್ರವರಿ 2ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, 1996ಕ್ಕೂ ಮುಂಚಿತವಾಗಿ ನೇಮಕಗೊಂಡ ದಿನಗೂಲಿ ನೌಕರರಿಗೆ ಪೂರ್ಣ ಪ್ರಮಾಣದ ತುಟ್ಟಿಭತ್ಯೆ (ಡಿ.ಎ.), ಮನೆ ಬಾಡಿಗೆ ಭತ್ಯೆ (ಎಚ್.ಆರ್.ಎ.), ಎಕ್ಸಗ್ರೇಷಿಯಾ ಸೇರಿದಂತೆ ಅರ್ಹ ಸೌಲಭ್ಯಗಳನ್ನು ಒದಗಿಸುವಂತೆ ಆದೇಶಿಸಿದೆ ಎಂದು ತಿಳಿಸಿದರು.

ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಪ್ರಯತ್ನ ನಡೆದ ಸಂದರ್ಭದಲ್ಲಿ, ತಾವು ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ದಾಖಲಿಸಿದ್ದಾಗಿ ಸಂಜಯ ಜೋಶಿ ಹೇಳಿದರು. ಬಳಿಕ ಪ್ರಕರಣವನ್ನು ಕಲಬುರಗಿ ಹೈಕೋರ್ಟ್ ಪೀಠದಲ್ಲಿಯೇ ಮುಂದುವರಿಸಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿ, ಸುಪ್ರೀಂ ಕೋರ್ಟ್ನಲ್ಲಿನ ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ ಎಂದು ವಿವರಿಸಿದರು.

“ಕಾಯ್ದೆಯನ್ನು ರೂಪಿಸಿ ಅದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳದಿದ್ದರೆ ಕಾಯ್ದೆ ರೂಪಿಸಿದ ಉದ್ದೇಶವೇನು? ಇದು ಕೇವಲ ನೌಕರರ ಸಮಸ್ಯೆಯಲ್ಲ. ಸುಮಾರು 22 ಸಾವಿರ ದಿನಗೂಲಿ ನೌಕರರು ಹಾಗೂ ಅವರ ಕುಟುಂಬಗಳ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಸರ್ಕಾರ ಮಾನವೀಯ ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ

ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ ಬುರಾಣಪೂರ ಮಾತನಾಡಿ, ದೀರ್ಘಕಾಲದಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಅರ್ಹ ನಿಯಮಾನುಸಾರ ನೌಕರರಿಗೆ ಸೇವಾ ಭದ್ರತೆ ಹಾಗೂ ಸೂಕ್ತ ವೇತನ ಶ್ರೇಣಿ ಒದಗಿಸಬೇಕು. ನೌಕರರು ಸಲ್ಲಿಸಿರುವ ಸೇವಾ ಅವಧಿಯನ್ನು ಪರಿಗಣಿಸಿ ವೇತನ ನಿಗದಿ ಮಾಡಬೇಕು. ಅರ್ಹತೆ ಹೊಂದಿರುವ ನೌಕರರನ್ನು ನಿಯಮಾನುಸಾರ ಹಂತ ಹಂತವಾಗಿ ಸೇವೆಯಲ್ಲಿ ಸಕ್ರಮಗೊಳಿಸುವ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ದಿನಗೂಲಿ ನೌಕರರಿಗೆ ನಿವೃತ್ತಿ ಸೌಲಭ್ಯ, ಸಾಮಾಜಿಕ ಭದ್ರತೆ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಪರಿಹರಿಸುವ ಬದಲು, ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ದಿನಗೂಲಿ ನೌಕರರು ತಮ್ಮ ಕುಟುಂಬಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಅಲ್ಪ ವೇತನದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಹೈಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವ ಮೂಲಕ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ಸರ್ಕಾರ ಈ ಬೇಡಿಕೆಗಳ ಕುರಿತು ಶೀಘ್ರ ನಿರ್ಧಾರ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸದಿದ್ದರೆ, ಮುಂದಿನ ಹಂತದಲ್ಲಿ ಕಾನೂನುಬದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಪ್ರಮುಖ ಲಕ್ಷ್ಮಣ ಹಂದ್ರಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕೊಂಡಗೂಳಿ, ಎಂ.ಕೆ. ಕುಲಕರ್ಣಿ, ಕೆ.ಎಂ. ಹೊನ್ನಕುದುರಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande