
ತುಮಕೂರು, 11 ಅಕ್ಟೋಬರ್ (ಹಿ.ಸ.):
ತಾಯಿ ಚಾಮುಂಡೇಶ್ವರಿ ಆರಾಧನೆ ಮೂಲಕ ಸುಭಿಕ್ಷ ನಾಡು, ಜನರ ಶಾಂತಿ ಮತ್ತು ನೆಮ್ಮದಿಗಾಗಿ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 11 ರಿಂದ 21ರವರೆಗೆ ಹಮ್ಮಿಕೊಂಡಿರುವ ತುಮಕೂರು ದಸರಾ ಉತ್ಸವಕ್ಕೆ ಭಾನುವಾರ ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಕಳೆದೆರಡು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ತುಮಕೂರು ದಸರಾ ಉತ್ಸವದ ಯಶಸ್ಸಿಗೆ ಕಾರಣರಾದ ಜಿಲ್ಲೆಯ ಜನತೆ, ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ನಾನು ಆಭಾರಿಯಾಗಿದ್ದೇನೆ. ಜಿಲ್ಲಾಡಳಿತದೊಂದಿಗೆ ಜೊತೆ-ಜೊತೆಯಾಗಿ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತಿ, ಪಾಲಿಕೆ ಸೇರಿದಂತೆ ಎಲ್ಲ ಇಲಾಖಾಧಿಕಾರಿಗಳ ಶ್ರಮ ಶ್ಲಾಘನೀಯವೆಂದು ಸ್ಮರಿಸಿದರು.
ಬರಗಾಲದಲ್ಲಿಯೂ ದಸರಾ ಆಚರಣೆ ಏಕೆಂಬ ಕೂಗು ಕೇಳಿ ಬರುತ್ತಿದೆ. ನಾಡಿನಲ್ಲಿ ಉದ್ಭವವಾಗಿರುವ ಅನಾವೃಷ್ಠಿಯನ್ನು ಹೋಗಲಾಡಿಸಲು ಚಾಮುಂಡಿ ದೇವಿಯ ಅನುಗ್ರಹ ನಮಗೆ ಅಗತ್ಯವಿದೆ. ನಾಡಿನ ಮಳೆ-ಬೆಳೆ ಪರಿಸ್ಥಿತಿ ಉತ್ತಮವಾಗಲೆಂದು ಈ ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಪೂಜಿಸುವುದನ್ನು ಹಿರಿಯರು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಹಿರಿಯರ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದೇ ನಮ್ಮ ಈ ಪ್ರಯತ್ನವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ದಸರಾ ಉತ್ಸವದ ಬಗ್ಗೆ ಬಂದ ಕೆಲವು ಟೀಕೆ-ಟಿಪ್ಪಣಿಗಳನ್ನು ಸ್ವೀಕರಿಸಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಂಡು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಪ್ರಜೆಗಳನ್ನು ಅನೀತಿ ಹಾದಿಯಲ್ಲಿ ಸಾಗದಂತೆ ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಕಟ್ಟಿಹಾಕುವ ದೃಷ್ಟಿಯಿಂದ ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆ ಪ್ರಾರಂಭವಾಯಿತು.
ವಿಜಯನಗರ ಸಾಮ್ರಾಜ್ಯ ಅಳಿವಿನ ಅಂಚಿಗೆ ಬಂದ ಸಂದರ್ಭದಲ್ಲಿ ಉತ್ಸವ ಆಚರಣೆಯನ್ನು ಮೈಸೂರು ಸಂಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಅನೀತಿ, ಅಧರ್ಮ ಅಳಿದು ಧರ್ಮಕ್ಕೇ ಜಯ ಸಿಗಬೇಕೆಂದು ದೇವಿಯನ್ನು ಆರಾಧಿಸಲು ಪ್ರಾರಂಭವಾದ ಮೈಸೂರು ದಸರಾ ಇಂದು ವಿಶ್ವಪ್ರಸಿದ್ಧವಾಗಿದೆ. ಮೈಸೂರು ದಸರಾ ಉತ್ಸವದ ಸಂಭ್ರಮವನ್ನು ವೀಕ್ಷಿಸಲು ಸಾಧ್ಯವಾಗದವರು ತುಮಕೂರಿನಲ್ಲಿ ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಲು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ದೇವಿಯ ಆಶೀರ್ವಾದದಿಂದ ಜನಸಮುದಾಯ ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳಬೇಕೆಂಬ ದಸರಾ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಸಾಹಿತಿ ಬೆಳ್ಳಾವಿ ನರಹರಿಶಾಸ್ತ್ರಿ, ನಾಟಕರತ್ನ ಡಾ: ಗುಬ್ಬಿ ವೀರಣ್ಣ, ಅಮರಶಿಲ್ಪಿ ಜಕಣಾಚಾರಿ ಸೇರಿದಂತೆ ಜಿಲ್ಲೆಯ ಹಲವಾರು ಸಾಹಿತಿಗಳು, ಕಲಾವಿದರು ಶ್ರೀಮಂತಗೊಳಿಸಿರುವ ಸಾಹಿತ್ಯ-ಕಲೆ-ಸಂಸ್ಕೃತಿಯನ್ನು ಇಂದಿನ ಯುವಕರು ಉತ್ಸವದಲ್ಲಿ ಪಾಲ್ಗೊಂಡು ತಿಳಿದುಕೊಳ್ಳಬೇಕು ಎಂದರಲ್ಲದೆ ಜಿಲ್ಲೆಯ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತುಮಕೂರನ್ನು ಅಗ್ರಸ್ಥಾನಕ್ಕೆ ತರುವ ಆಶಯ ಹೊಂದಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜನತೆ ದಸರಾ ಉತ್ಸವದ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭವ್ಯವಾಗಿ ನಿರ್ಮಿಸಿರುವ ಶ್ರೀ ಶ್ರೀ ಶ್ರೀ ಡಾ: ಶಿವಕುಮಾರ ಮಹಾಸ್ವಾಮೀಜಿ ಧಾರ್ಮಿಕ ಮಹಾಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ತಾಯಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಮಾತನಾಡಿ, ಮನುಷ್ಯನ ಅಂತರಂಗ-ಬಹಿರಂಗ ಶುದ್ಧಿಗಾಗಿ ಇಂತಹ ಹಬ್ಬಗಳ ಆಚರಣೆ ಅತ್ಯಾವಶ್ಯಕ. ಇಲ್ಲಿ ಪೂಜಿಸುವ ಶಕ್ತಿರೂಪಿಣಿ ಚಾಮುಂಡೇಶ್ವರಿಯ ಆಶೀರ್ವಾದ ಜಿಲ್ಲೆಗೆ ದೊರೆಯಲಿ ಎಂದು ತಿಳಿಸಿದರು.
ಎಲೆರಾಂಪುರ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಡಾ. ಹನುಮಂತನಾಥ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತುಮಕೂರು ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ದಸರಾ ಉತ್ಸವ ಆಚರಣೆಯಲ್ಲಿ ತುಮಕೂರು ಎರಡನೇ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳನ್ನೊಳಗೊಂಡ ಈ ದಸರಾ ಆಚರಣೆ ಮನೆ-ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ನುಡಿದರು.
ಸುಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಮಠದ ಶ್ರೀ ಷ: ಬ್ರ: ವೀರಭದ್ರ ಶಿವಾಚಾರ್ಯ ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ತಾಯಿ ಚಾಮುಂಡೇಶ್ವರಿಯು ದುಷ್ಟಶಕ್ತಿಯನ್ನು ಸಂಹರಿಸಿದಂತೆ ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರವನ್ನು ಸಂಹಾರ ಮಾಡಿಕೊಳ್ಳಬೇಕೆಂಬುದೇ ನವರಾತ್ರಿಯ ಆಚರಣೆ ಪ್ರತೀಕವೆಂದು ಮಾರ್ಮಿಕವಾಗಿ ಹೇಳಿದರು.
ಬೆಳ್ಳಾವಿ ಶ್ರೀ ಕಾರದೇಶ್ವರ ಮಠದ ಶ್ರೀ ಶ್ರೀ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಮಾತನಾಡಿ ಜಿಲ್ಲಾ ದಸರಾ ಉತ್ಸವವು “ತುಮಕೂರು ದಸರಾ-ಎಷ್ಟೊಂದು ಸುಂದರ” ಎನ್ನುವಂತೆ ಮಾಡಿದೆ. ಬರಗಾಲವಿದ್ದರೂ ದಸರಾ ಆಚರಣೆ ಮೂಲಕ ಜಿಲ್ಲೆಯಲ್ಲಿ ಉಂಟಾಗಿರುವ ಬರಪರಿಸ್ಥಿತಿಯಿಂದ ಪಾರು ಮಾಡೆಂದು ದೇವಿಸ್ತುತಿ ಮಾಡುವುದು ತಪ್ಪಲ್ಲವೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ ದೇವಿಯನ್ನು ಪ್ರತಿಷ್ಠಾಪಿಸಲು ನಿರ್ಮಿಸಿರುವ ದಸರಾ ಉತ್ಸವದ ಧಾರ್ಮಿಕ ಮಂಟಪವು ಅರಮನೆ ಪ್ರವೇಶ ಮಾಡಿದ ಅನುಭವ ನೀಡುತ್ತದೆ. ದೇವಿಯ ಅಲಂಕಾರವು ಎಲ್ಲರ ಮನದಲೂ ಭಕ್ತಿ-ಭಾವ ಮೂಡುವಂತಿದೆ. ದಸರಾ ಉತ್ಸವವು ಧಾರ್ಮಿಕ ಭಾವನೆ ಮೂಡಿಸುವುದಲ್ಲದೆ ಇಲ್ಲಿ ಏರ್ಪಡಿಸಿರುವ ವಸ್ತುಪ್ರದರ್ಶನವು ವಿದ್ಯಾರ್ಥಿಗಳಿಗೆ ಜಾನಾರ್ಜನೆಯನ್ನೂ ನೀಡುತ್ತದೆ. ತುಮಕೂರಿನ ಜನರು ದೇವಿಯ ಕೃಪಾಕಟಾಕ್ಷದೊಂದಿಗೆ ವಸ್ತುಪ್ರದರ್ಶನದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.