ಪೂಂದಮಲ್ಲಿ–ವಡಪಳನಿ ಮೆಟ್ರೊ ರೈಲು ಸೇವೆಗೆ ಚಾಲನೆ: ಪ್ರಧಾನಿ ಮೋದಿ, ಮುಖ್ಯಮಂತ್ರಿ ವಿಜಯ್ ಒಟ್ಟಿಗೆ ಪ್ರಯಾಣ
ಚೆನೈ, 11 ಅಕ್ಟೋಬರ್ (ಹಿ.ಸ.): ಚೆನ್ನೈನಲ್ಲಿ ಎರಡನೇ ಹಂತದ ಮೆಟ್ರೊ ರೈಲು ಯೋಜನೆಯ ಮೊದಲ ಭಾಗವಾಗಿ ಪೂಂದಮಲ್ಲಿ ಬೈಪಾಸ್‌ನಿಂದ ವಡಪಳನಿವರೆಗಿನ ಮೆಟ್ರೊ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜಂಟಿಯಾಗಿ ಚಾಲನೆ ನೀಡಿದರು. ಬಳಿಕ ಇಬ್ಬರೂ ಒಂದೇ ಮೆಟ್ರೊ ರೈಲಿನಲ್ಲ
ಮೆಟ್ರೋ ಸೇವೆಗೆ ಪ್ರಧಾನಿ ಚಾಲನೆ


ಚೆನೈ, 11 ಅಕ್ಟೋಬರ್ (ಹಿ.ಸ.):

ಚೆನ್ನೈನಲ್ಲಿ ಎರಡನೇ ಹಂತದ ಮೆಟ್ರೊ ರೈಲು ಯೋಜನೆಯ ಮೊದಲ ಭಾಗವಾಗಿ ಪೂಂದಮಲ್ಲಿ ಬೈಪಾಸ್‌ನಿಂದ ವಡಪಳನಿವರೆಗಿನ ಮೆಟ್ರೊ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜಂಟಿಯಾಗಿ ಚಾಲನೆ ನೀಡಿದರು. ಬಳಿಕ ಇಬ್ಬರೂ ಒಂದೇ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ಚೆನ್ನೈ ಮಹಾನಗರದ ಜನರ ಬಹುದಿನಗಳ ಕನಸಾಗಿದ್ದ ಎರಡನೇ ಹಂತದ ಮೆಟ್ರೊ ರೈಲು ಯೋಜನೆಯ ಮೊದಲ ಭಾಗ ಇದೀಗ ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜತೆಗೆ ಪ್ರಯಾಣದ ಸಮಯವನ್ನು ತಗ್ಗಿಸುವ ಉದ್ದೇಶದಿಂದ ಪೂಂದಮಲ್ಲಿ ಬೈಪಾಸ್‌ನಿಂದ ವಡಪಳನಿವರೆಗೆ 14.6 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗಿದೆ.

ತಮಿಳುನಾಡಿನಲ್ಲಿ ನೂತನ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಚೆನ್ನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ವಿಜಯ್ ಸಮ್ಮುಖದಲ್ಲಿ ಮೆಟ್ರೊ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಇಬ್ಬರೂ ನಾಯಕರು ಒಂದೇ ರೈಲಿನಲ್ಲಿ ಪ್ರಯಾಣಿಸಿ ಗಮನ ಸೆಳೆದರು.

ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಚೆನ್ನೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ವಿಜಯ್ ಮತ್ತು ಸಚಿವರು ವಿಮಾನ ನಿಲ್ದಾಣದಲ್ಲಿ ಶಾಲು ಹೊದಿಸಿ ಸ್ವಾಗತಿಸಿದರು. ಬಳಿಕ ಪ್ರಧಾನಿ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಪೋರೂರು ಕಡೆಗೆ ತೆರಳಿದರು.

ವಿಮಾನ ನಿಲ್ದಾಣದಿಂದ ಪೋರೂರುವರೆಗಿನ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರಧಾನಿಯನ್ನು ಉತ್ಸಾಹದಿಂದ ಸ್ವಾಗತಿಸಿದರು. ಜನರ ಅಭಿಮಾನಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಕಾರಿನ ಬಾಗಿಲು ತೆರೆದು ಜನರತ್ತ ಕೈಬೀಸಿ ಅಭಿನಂದನೆ ಸ್ವೀಕರಿಸಿದರು.

ಪೋರೂರು ಮೆಟ್ರೊ ರೈಲು ನಿಲ್ದಾಣಕ್ಕೆ ತಲುಪಿದ ಬಳಿಕ ಪ್ರಧಾನಿ ಮೋದಿ ಅವರು ಪೂಂದಮಲ್ಲಿ–ವಡಪಳನಿ ನಡುವಿನ ನೂತನ ಮೆಟ್ರೊ ರೈಲು ಸೇವೆಯನ್ನು ಉದ್ಘಾಟಿಸಿದರು. ನಂತರ ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ರೈಲಿನಲ್ಲಿ ಪ್ರಯಾಣಿಸಿದರು. ಈ ವೇಳೆ ರೈಲಿನಲ್ಲಿದ್ದ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳೊಂದಿಗೆ ಉತ್ಸಾಹದಿಂದ ಮಾತನಾಡಿದರು.

ಎರಡನೇ ಹಂತದ ಮೆಟ್ರೊ ರೈಲು ಯೋಜನೆಯ ಮೊದಲ ಭಾಗವಾಗಿ ಸದ್ಯ 11 ನಿಲ್ದಾಣಗಳನ್ನು ಸಾರ್ವಜನಿಕರ ಬಳಕೆಗೆ ತೆರೆಯಲಾಗಿದೆ. ಪ್ರಯಾಣಿಕರಿಗೆ ಸುಗಮ ಹಾಗೂ ಸುರಕ್ಷಿತ ಸೇವೆ ಒದಗಿಸಲು ಮೆಟ್ರೊ ಆಡಳಿತ ಮಂಡಳಿಯು ಅಗತ್ಯ ಸುರಕ್ಷತಾ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande