
ಬೆಂಗಳೂರು, 10 ಅಕ್ಟೋಬರ್ (ಹಿ.ಸ.):
ಇಂದಿರಾ ಕ್ಯಾಂಟೀನ್ಗಳಲ್ಲಿ ನಿಗದಿಪಡಿಸಿರುವ ಆಹಾರ ಮೆನುವಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ, ಆಹಾರ ಪೂರೈಕೆಯ ಹೊಣೆ ಹೊತ್ತಿರುವ ‘ರಿವಾರ್ಡ್ಸ್’ ಸಂಸ್ಥೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್ ಅವರು ಪಾಲಿಕೆಯ ಪಟ್ಟಾಭಿನಗರ ವಾರ್ಡ್ ವ್ಯಾಪ್ತಿಯ ಜಯನಗರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿ, ಆಹಾರದ ಗುಣಮಟ್ಟ, ಶುಚಿತ್ವ, ದಾಸ್ತಾನು ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುತ್ತಿರುವ ಆಹಾರದ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮೆನು ಉಲ್ಲಂಘನೆ ಆಗಿರುವುದು ಬೆಳಕಿಗೆ ಬಂದಿದೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ಸಾರ್ವಜನಿಕರಿಗೆ ನಿಗದಿತ ಮೆನುವಿನ ಪ್ರಕಾರ ಆಹಾರ ಒದಗಿಸಬೇಕು. ಆದರೆ, ಮೆನು ನಿಯಮಗಳ ಪಾಲನೆಯಲ್ಲಿ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಂಸ್ಥೆಯ ವಿರುದ್ಧ ಜಿಬಿಎ ಕ್ರಮ ಕೈಗೊಂಡಿದೆ.
ಸರ್ಕಾರದ ಜನಪರ ಯೋಜನೆಯಾದ ಇಂದಿರಾ ಕ್ಯಾಂಟೀನ್ಗಳ ಮೂಲಕ ಬಡವರು, ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗುತ್ತಿದೆ. ಹೀಗಾಗಿ, ಆಹಾರದ ಗುಣಮಟ್ಟ ಮತ್ತು ನಿಗದಿತ ಮೆನುವಿನ ಪಾಲನೆಗೆ ಸಂಬಂಧಿಸಿದಂತೆ ಯಾವುದೇ ನಿರ್ಲಕ್ಷ್ಯ ನಡೆಯದಂತೆ ಅಧಿಕಾರಿಗಳು ಕ್ರಮ ವಹಿಸುವ ಅಗತ್ಯವಿದೆ.
ನಿಗದಿತ ಮೆನುವಿನ ಪ್ರಕಾರ ಆಹಾರ ಪೂರೈಕೆ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಸ್ಪಷ್ಟನೆ ಪಡೆಯಲು ನೋಟಿಸ್ ನೀಡಲಾಗಿದೆ ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R