
ವಾಷಿಂಗ್ಟನ್ 10 ಅಕ್ಟೋಬರ್ (ಹಿ.ಸ.):
ಜಾಗತಿಕ ಮಾರುಕಟ್ಟೆಯಲ್ಲಿ ವೇಗವಾಗಿ ಏರುತ್ತಿರುವ ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಮುಂಬರುವ ತಿಂಗಳುಗಳಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಿಗೆ ಲಕ್ಷಾಂತರ ಟನ್ ಡೀಸೆಲ್ ಇಂಧನ ಪೂರೈಸಲು ರಷ್ಯಾ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಶುಕ್ರವಾರ ಸಂಜೆ ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ ಸೋಷಿಯಲ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಮಾತುಕತೆಯಲ್ಲಿ 3 ಲಕ್ಷ ಟನ್ ಡೀಸೆಲ್ ಬಿಡುಗಡೆ ಮಾಡಲು ಪುಟಿನ್ ಒಪ್ಪಿಕೊಂಡಿದ್ದಾರೆ. ನವೆಂಬರ್‌ನಲ್ಲಿ 5 ಲಕ್ಷ ಟನ್ ಹಾಗೂ ಡಿಸೆಂಬರ್‌ನಲ್ಲಿ 10 ಲಕ್ಷ ಟನ್ ಡೀಸೆಲ್ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ರಷ್ಯಾದ ಡೀಸೆಲ್ ಸಂಸ್ಕರಣಾಗಾರಗಳ ಕಾರ್ಯನಿರ್ವಹಣೆಯ ಸ್ಥಿತಿಯನ್ನು ಆಧರಿಸಿ ಶೀಘ್ರದಲ್ಲೇ ಹೆಚ್ಚುವರಿಯಾಗಿ 30 ಲಕ್ಷ ಟನ್ ಡೀಸೆಲ್ ಇಂಧನ ಪೂರೈಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
ಇದೇ ವೇಳೆ, ಜಾಗತಿಕ ಮಾರುಕಟ್ಟೆಯಲ್ಲಿ ರಷ್ಯಾದ ಡೀಸೆಲ್ ಪೂರೈಕೆಗೆ ಅವಕಾಶ ಕಲ್ಪಿಸಲು ರಷ್ಯಾದ ಇಂಧನ ವಲಯದ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸುವುದಾಗಿ ಅಮೆರಿಕದ ಹಣಕಾಸು ಇಲಾಖೆ ಶುಕ್ರವಾರ ಘೋಷಿಸಿದೆ.
ತೈಲ ಪೂರೈಕೆಗೆ ರಷ್ಯಾ ಸಿದ್ಧ
ಕ್ರೆಮ್ಲಿನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಟ್ರಂಪ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿರುವುದನ್ನು ಪುಟಿನ್ ದೃಢಪಡಿಸಿದ್ದಾರೆ. ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸಲು ರಷ್ಯಾ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ. ಈ ಕ್ರಮವು ಜಾಗತಿಕ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಉಭಯ ದೇಶಗಳ ಅಧ್ಯಕ್ಷರ ನಡುವಿನ ನೇರ ಸಂಪರ್ಕವನ್ನು ಮುಂದುವರಿಸುವುದರ ಜೊತೆಗೆ, ಅಧ್ಯಕ್ಷರ ಆಡಳಿತ ವಿಭಾಗಗಳು, ಭದ್ರತಾ ಸಂಸ್ಥೆಗಳು ಮತ್ತು ಇತರ ಇಲಾಖೆಗಳ ನಡುವಿನ ಸಹಕಾರವನ್ನು ಮುಂದುವರಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಕ್ರೆಮ್ಲಿನ್ ಹೇಳಿದೆ.
ಪುಟಿನ್ ಮತ್ತು ಟ್ರಂಪ್ ನಡುವಿನ ಮಾತುಕತೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಪರಿಹಾರದ ಸಾಧ್ಯತೆಗಳು, ಇರಾನ್‌ಗೆ ಸಂಬಂಧಿಸಿದ ಪರಿಸ್ಥಿತಿ ಹಾಗೂ ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಚರ್ಚೆ ನಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿರ್ಬಂಧ ಸಡಿಲಿಕೆಗೆ ಝೆಲೆನ್‌ಸ್ಕಿ ವಿರೋಧ
ರಷ್ಯಾದೊಂದಿಗಿನ ಈ ಒಪ್ಪಂದವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತೀವ್ರವಾಗಿ ವಿರೋಧಿಸಿದ್ದಾರೆ. ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದು ದೌರ್ಬಲ್ಯದ ಸಂಕೇತವಾಗಲಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಟೀಕಿಸಿದ್ದಾರೆ.
ಪುಟಿನ್‌ಗೆ ನೀಡುವ ಉಡುಗೊರೆಗಳು ನಾಗರಿಕ ಜಗತ್ತಿನ ಹಿತಾಸಕ್ತಿಗೆ ಅನುಕೂಲಕರವಾಗುವುದಿಲ್ಲ. ರಷ್ಯಾ ಇದಕ್ಕೆ ಪ್ರತಿಯಾಗಿ ಭಯೋತ್ಪಾದನೆ ಮತ್ತು ವಂಚನೆಯ ಮೂಲಕ ಪ್ರತಿಕ್ರಿಯಿಸಲಿದೆ ಎಂದು ಅವರು ಆರೋಪಿಸಿದ್ದಾರೆ.
ರಷ್ಯಾಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದು ಅಂತ್ಯಗೊಳಿಸಬೇಕಾದ ಯುದ್ಧವನ್ನು ದೀರ್ಘಗೊಳಿಸುವುದರಲ್ಲಿ ಹೂಡಿಕೆ ಮಾಡಿದಂತೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾದೊಂದಿಗೆ ಪರಸ್ಪರ ಆಧಾರದ ಮೇಲೆ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ನಿರ್ಬಂಧ ನೀತಿಯಲ್ಲಿ ಬದಲಾವಣೆ
ಟ್ರಂಪ್ ಆಡಳಿತದ ಈ ಕ್ರಮಗಳು 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಸಿದ ಬಳಿಕ ರಷ್ಯಾದ ಆರ್ಥಿಕತೆಯನ್ನು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳ ನೀತಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತವೆ.
ಕಳೆದ ತಿಂಗಳು ಟ್ರಂಪ್ ಅವರು ರಷ್ಯಾದ ಇಂಧನದ ಪ್ರಮುಖ ಖರೀದಿದಾರರ ಮೇಲೆ ಹೆಚ್ಚಿನ ಸುಂಕ ವಿಧಿಸುವ ಮೂಲಕ ತೈಲ ಮತ್ತು ಅನಿಲ ರಫ್ತಿನಿಂದ ರಷ್ಯಾ ಲಾಭ ಗಳಿಸುವುದನ್ನು ಕಷ್ಟಕರವಾಗಿಸುವ ಉದ್ದೇಶದ ಮಸೂದೆಗೆ ಸಹಿ ಹಾಕಿದ್ದರು. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಹೆಚ್ಚಿಸುವ ಉದ್ದೇಶದಿಂದ ರಷ್ಯಾದ ಮೇಲಿನ ಕೆಲವು ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸುವ ಕ್ರಮ ಕೈಗೊಳ್ಳಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.