
ನವದೆಹಲಿ, 10 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಶನಿವಾರ ಮಹಾಲಯ ಅಮಾವಾಸ್ಯೆ ಪವಿತ್ರ ಸಂದರ್ಭದಲ್ಲಿ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿದ್ದು, ಈ ಪವಿತ್ರ ಸಂದರ್ಭದಲ್ಲಿ ತಾಯಿ ದುರ್ಗೆಯ ಆಶೀರ್ವಾದವನ್ನು ಕೋರೋಣ. ಅವರ ಆಶೀರ್ವಾದವು ನಮ್ಮ ಸಮಾಜವನ್ನು ಸಂತೋಷ, ಕರುಣೆ ಮತ್ತು ಭರವಸೆಯಿಂದ ತುಂಬಲಿ. ಎಲ್ಲೆಡೆ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ತಾಯಿ ದುರ್ಗೆಯ ಆಶೀರ್ವಾದವು ಪ್ರತಿಯೊಬ್ಬರ ಜೀವನವನ್ನು ಅಪಾರ ಸಂತೋಷ, ಸುಖ, ಸಮೃದ್ಧಿ ಮತ್ತು ನೆಮ್ಮದಿಯಿಂದ ತುಂಬಲಿ ಎಂದು ಹಾರೈಸಿದ್ದಾರೆ. ಪಿತೃಪಕ್ಷದ ಮುಕ್ತಾಯ ಹಾಗೂ ದೇವಿಪಕ್ಷದ ಆರಂಭದ ಸಂಗಮವಾಗಿರುವ ಮಹಾಲಯದಂದು ತಾಯಿ ದುರ್ಗೆಯ ಆಗಮನದ ಸಂದೇಶ ಮೊಳಗುತ್ತದೆ. ತಾಯಿಯ ಆಶೀರ್ವಾದದಿಂದ ಎಲ್ಲರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ತಾಯಿ ದುರ್ಗೆಯ ಆಶೀರ್ವಾದ ಸದಾ ನಮ್ಮ ಮೇಲಿರಲಿ. ಅದು ನಮ್ಮ ಜೀವನದಲ್ಲಿ ಸಂತೋಷ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ.
ಮಹಾಲಯದ ಮಹತ್ವ
ಸನಾತನ ಧರ್ಮದಲ್ಲಿ, ವಿಶೇಷವಾಗಿ ಬಂಗಾಳಿ ಸಮುದಾಯದಲ್ಲಿ ಮಹಾಲಯಕ್ಕೆ ಮಹತ್ವದ ಸ್ಥಾನವಿದೆ. ಆಶ್ವಯುಜ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಈ ಪವಿತ್ರ ದಿನವು ಪಿತೃಪಕ್ಷದ ಅಂತ್ಯ ಮತ್ತು ದೇವಿಪಕ್ಷದ ಆರಂಭವನ್ನು ಸೂಚಿಸುತ್ತದೆ. ಮಹಾಲಯದೊಂದಿಗೆ ನವರಾತ್ರಿ ಹಾಗೂ ದುರ್ಗಾಪೂಜೆಯ ಸಿದ್ಧತೆಗಳಿಗೆ ವಿಶೇಷ ಮಹತ್ವ ದೊರೆಯುತ್ತದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.