ನಾಳೆ 416ನೇ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ
ಚಾಮುಂಡಿ ಬೆಟ್ಟದಲ್ಲಿ ಅಂತಿಮ ಹಂತದ ಸಿದ್ಧತೆ; ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯಿಂದ ಉದ್ಘಾಟನೆ
ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು


ಮೈಸೂರು, 10 ಅಕ್ಟೋಬರ್ (ಹಿ.ಸ.):

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ 416ನೇ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದ್ದು, ನಾಡಹಬ್ಬದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಯಲ್ಲಿ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ನಾಳೆ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು,ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯ ನೆರವೇರಿಸಲಾಗಿದೆ ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ಅರಮನೆಯಿಂದ ತರಲಾಗಿರುವ ಮಹಿಷ ಮರ್ದಿನಿ ಅವತಾರದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ನವರಾತ್ರಿಯ ಪ್ರತಿದಿನವೂ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ನಾಳೆ ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆ

ನಾಳೆ ಬೆಳಿಗ್ಗೆ 11.50ರಿಂದ ಮಧ್ಯಾಹ್ನ 12.13ರ ನಡುವಿನ ಧನುರ್ ಲಗ್ನದಲ್ಲಿ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಈ ಬಾರಿಯ ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 100ಕ್ಕೂ ಹೆಚ್ಚು ಧರ್ಮಗುರುಗಳು ಪಾಲ್ಗೊಳ್ಳಲಿದ್ದು, ಗಣ್ಯರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಅರಮನೆಯಲ್ಲಿ ರಾಜಮನೆತನದ ವಿಧಿವಿಧಾನ

ಇನ್ನೊಂದೆಡೆ, ಅಂಬಾವಿಲಾಸ ಅರಮನೆಯಲ್ಲಿಯೂ ಸಾಂಪ್ರದಾಯಿಕ ರಾಜಮನೆತನದ ವಿಧಿವಿಧಾನಗಳು ಆರಂಭವಾಗಿವೆ. ನಾಳೆ ಬೆಳಿಗ್ಗೆ 6ರಿಂದ 7.12ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನಡೆಯಲಿದೆ.

ಬಳಿಕ ಬೆಳಿಗ್ಗೆ 8.35ರಿಂದ 9.05ರವರೆಗೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣಧಾರಣೆ ನೆರವೇರಲಿದೆ. ನಂತರ ಬೆಳಿಗ್ಗೆ 11.45ರಿಂದ ಮಧ್ಯಾಹ್ನ 12.05ರವರೆಗೆ ಸಿಂಹಾಸನಾರೋಹಣ ನಡೆಯಲಿದ್ದು, ಇದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಅಧಿಕೃತವಾಗಿ ಆರಂಭವಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande