
ಬೆಂಗಳೂರು, 10 ಅಕ್ಟೋಬರ್ (ಹಿ.ಸ.):
ದೇಶದ ನಿಜವಾದ ಸಂಪತ್ತಾಗಿರುವ ವಿದ್ಯಾರ್ಥಿಗಳು ಮತ್ತು ಯುವಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ಇಂದು ‘ಸಂವಾದ’ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವಾಧಿವೇಶನ 2026: ಮಾನಸಿಕ ಆರೋಗ್ಯಕ್ಕಾಗಿ ಯುವಯಾನ’ ಕಾರ್ಯಕ್ರಮ ಉದ್ಘಾಟಿಸಿ, ಯುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಯುವಜನರ ಭವಿಷ್ಯ ಹಾಗೂ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಮಾತನಾಡಿದರು.
ಎಂಜಿನಿಯರ್, ವೈದ್ಯರು ಅಥವಾ ವಕೀಲರಾಗಲು ಪ್ರತ್ಯೇಕ ಕಾಲೇಜುಗಳಿವೆ. ಆದರೆ, ಆದರ್ಶ ಸತ್ಪ್ರಜೆಯಾಗಲು ಯಾವುದೇ ಪ್ರತ್ಯೇಕ ತರಬೇತಿ ಕೇಂದ್ರಗಳಿಲ್ಲ. ಹೀಗಾಗಿ, ‘ಸಂವಾದ’ದಂತಹ ಸ್ವಯಂಸೇವಾ ಸಂಸ್ಥೆಗಳು ಯುವಜನರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಸಮಾಜಕ್ಕೆ ಉತ್ತಮ ನಾಗರಿಕರಾಗಿ ರೂಪುಗೊಳ್ಳುವುದೇ ನಮ್ಮ ನಿಜವಾದ ಸಂಪತ್ತು ಎಂದು ಹೇಳಿದರು.
ವಿಧಾನಸೌಧ, ಸಂಸತ್ತು ಅಥವಾ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಳ್ಳುವವರು ಬಲಿಷ್ಠರಾದ ಮಾತ್ರಕ್ಕೆ ದೇಶ ಬಲಿಷ್ಠವಾಗುವುದಿಲ್ಲ. ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಮತ್ತು ಕ್ರೀಡಾಂಗಣಗಳಲ್ಲಿ ಬೆಳೆಯುವ ಯುವಜನರು ಬಲಿಷ್ಠರಾದಾಗ ಮಾತ್ರ ಭಾರತ ಜಗತ್ತಿನಲ್ಲಿ ಪ್ರಥಮ ಸ್ಥಾನಕ್ಕೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ಯುವಜನರು ಯಾವುದೇ ಕಷ್ಟ-ನಷ್ಟಗಳಿಗೆ ಎದೆಗುಂದದೆ, ನೈತಿಕತೆ ಮತ್ತು ಆತ್ಮವಿಶ್ವಾಸದಿಂದ ಭವಿಷ್ಯದ ಭಾರತವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ವಿಶ್ವಕ್ಕೆ ಮಾದರಿಯಾಗುವಂತಹ ಮಾನವ ಸಂಪನ್ಮೂಲ ನಮ್ಮ ದೇಶದ ಯುವಜನರಲ್ಲಿದ್ದು, ಈ ಶಕ್ತಿಯನ್ನು ಸತ್ಪ್ರಜೆಗಳಾಗಿ ರೂಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಯುವಶಕ್ತಿಯನ್ನು ಸತ್ಪ್ರಜೆಗಳಾಗಿ ರೂಪಿಸುವ ಉದ್ದೇಶದಿಂದ ‘ಯುವಾಧಿವೇಶನ’ದಂತಹ ಕಾರ್ಯಕ್ರಮವನ್ನು ಯೋಜಿಸಿ ಯಶಸ್ವಿಯಾಗಿ ಆಯೋಜಿಸಿದ ‘ಸಂವಾದ’ ಸಂಸ್ಥೆಯ ಕಾರ್ಯಕಾರಿ ಸಹನಿರ್ದೇಶಕಿ ಡಾ. ಸವಿತಾ ಸುರೇಶ್‌ಬಾಬು, ‘ಸಹಯಾನ ಮತ್ತು ಬದುಕು’ ಕಾರ್ಯಕ್ರಮದ ನಿರ್ದೇಶಕ ಡಾ. ಮುರಳಿ ಮೋಹನ್ ಕಾಟಿ ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.