
ಹರಾರೆ (ಜಿಂಬಾಬ್ವೆ), 01 ಅಕ್ಟೋಬರ್ (ಹಿ.ಸ.):
ಜಿಂಬಾಬ್ವೆಯ ಮ್ಯಾರೊಂಡೆರಾದಲ್ಲಿ ಬುಧವಾರ ಹೆಲಿಕಾಪ್ಟರ್‌ವೊಂದು ಅಪಘಾತಕ್ಕೀಡಾಗಿ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಸೇರಿ ಎಲ್ಲ ಆರು ಮಂದಿ ಮೃತಪಟ್ಟಿದ್ದಾರೆ.
ಮೃತರಲ್ಲಿ 43 ವರ್ಷದ ಉದ್ಯಮಿ ವಿಕ್ನೆಲ್ ಚಿವಾಯೊ ಹಾಗೂ ಅವರ ಪತ್ನಿ ಲೂಸಿ ಮುಟೆಕೆ ಕೂಡ ಸೇರಿದ್ದಾರೆ. ಚಿವಾಯೊ ಅವರು ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ಮನಂಗಾಗ್ವಾ ಅವರ ಆಪ್ತರೆಂದು ಪರಿಗಣಿಸಲಾಗಿತ್ತು.
ಜಿಂಬಾಬ್ವೆಯ ‘ನ್ಯೂಸ್ ಡೇ’ ಪತ್ರಿಕೆಯ ವರದಿ ಪ್ರಕಾರ, ರಾಜಧಾನಿ ಹರಾರೆಯಿಂದ ಸುಮಾರು 70 ಕಿಲೋಮೀಟರ್ ಪೂರ್ವದಲ್ಲಿರುವ ಮ್ಯಾರೊಂಡೆರಾದಲ್ಲಿ ಈ ಅಪಘಾತ ಸಂಭವಿಸಿದೆ. ಬುಧವಾರ ಸಂಜೆ ಸುಮಾರು 5 ಗಂಟೆಗೆ ಪೊಲೀಸರಿಗೆ ಅಪಘಾತದ ಮಾಹಿತಿ ಲಭಿಸಿತ್ತು. ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಿಕ್ನೆಲ್ ಚಿವಾಯೊ ಅವರು ಇಂಟ್ರಾಟ್ರೆಕ್ ಜಿಂಬಾಬ್ವೆ ಸಂಸ್ಥೆಯ ಸ್ಥಾಪಕರಾಗಿದ್ದರು. ಈ ಕಂಪನಿ ಇಂಧನ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಗ್ವಾಂಡಾ ಸೌರ ವಿದ್ಯುತ್ ಯೋಜನೆ ಸೇರಿದಂತೆ ಹಲವು ಸರ್ಕಾರಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಚಿವಾಯೊ ಅವರು ಚರ್ಚೆಯಲ್ಲಿದ್ದರು.
ಚಿವಾಯೊ ಅವರು ತಮ್ಮ ವೈಭವದ ಜೀವನಶೈಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೂ ಹೆಸರಾಗಿದ್ದರು. ದುಬಾರಿ ಕಾರುಗಳು ಮತ್ತು ಐಷಾರಾಮಿ ಹೆಲಿಕಾಪ್ಟರ್‌ಗಳೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ, ತಾಂಜಾನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್ ಹಾಗೂ ಎಸ್ವಾಟಿನಿ ದೊರೆ ಮಸ್ವಾತಿ ತೃತೀಯ ಸೇರಿದಂತೆ ಹಲವು ಪ್ರಮುಖ ನಾಯಕರೊಂದಿಗೆ ಚಿವಾಯೊ ಆಪ್ತ ಸಂಪರ್ಕ ಹೊಂದಿದ್ದರು.
ಜಿಂಬಾಬ್ವೆ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿನ ಸರ್ಕಾರಿ ಗುತ್ತಿಗೆಗಳು ಮತ್ತು ಚುನಾವಣಾ ನಿಧಿಗೆ ಸಂಬಂಧಿಸಿದಂತೆ ಚಿವಾಯೊ ಅವರ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಆದರೆ ಅವರು ಈ ಆರೋಪಗಳನ್ನು ನಿರಾಕರಿಸಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.