
ಮಹಾತ್ಮ ಗಾಂಧೀಜಿ ನಡೆದ ಬಂದ ಹಾದಿ
ದೇಶದ ಸ್ವಾತಂತ್ರ್ಯ ಹಾಗೂ ಸಮಾನತೆಗೆ ಶ್ರಮಿಸಿದ ಸರಳ ವ್ಯಕ್ತಿತ್ವದ ಮಹಾತ್ಮ ಗಾಂಧೀಜಿಯವರು ವಿದೇಶಿ ಆಡಳಿತವನ್ನು ದೂರ ಮಾಡುವುದು ಸ್ವಾತಂತ್ರ್ಯ ಒಂದು ಭಾಗ ಮಾತ್ರವಾಗಿದೆ. ದೇಶದ ಆಡಳಿತ ಭಾರತೀಯರ ಕೈಗೆ ಬಂದರೂ ಬಡತನ, ಹಸಿವು, ಅಜ್ಞಾನ, ಅಸಮಾನತೆ , ಅಸ್ಪೃಶ್ಯತೆ ಶೋಷಣೆ ಮತ್ತು ಬೇಧಬಾವಗಳು ಮುಂದುವರೆದರೆ ಅದು ಸಂಪೂರ್ಣ ಸ್ವಾತಂತ್ರವಾಗುವುದಿಲ್ಲ ಎನ್ನುವುದು ಮಹಾತ್ಮ ಗಾಂಧೀಜಿಯವರ ಅಭಿಪ್ರಾಯವಾಗಿತ್ತು.
ಅವರ ಕನಸಿನ ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಬದುಕುವ ಅವಕಾಶ ಇರಬೇಕು. ಬಡವನಿಗೂ ಶ್ರೀಮಂತನಿಗೂ ಸಮಾನ ಗೌರವ ದೊರೆಯಬೇಕು. ರೈತ ಕಾರ್ಮಿಕ ಮಹಿಳೆ ದುರ್ಬಲರು ಮತ್ತು ಹಿಂದುಳಿದವರು ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವದಿಂದ ಬದುಕಬೇಕು ಎಂಬುದು ಗಾಂಧೀಜಿಯವರ ಕನಸಿನ ಭಾರತದ ಉದ್ದೇಶವಾಗಿತ್ತು.
ಇಂದು ನಾವು ಸ್ವಾತಂತ್ರ್ಯ ಭಾರತದಲ್ಲಿ ಬದುಕುತ್ತಿದ್ದೇವೆ. ಆದರೆ ಗಾಂಧೀಜಿಯವರು ಕನಸು ಕಂಡ ಸಂಫೂರ್ಣ ಸ್ವಾತಂತ್ರö್ಯವನ್ನೂ ಸಾಧಿಸಲು ಇನ್ನೂ ಅನೇಕ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಬಡತನ, ನಿರುದ್ಯೋಗ , ಭ್ರಷ್ಟಾಚಾರ , ಅಸಮಾನತೆ , ಸಾಮಾಜಿಕ ಬೇಧಭಾವ ಮತ್ತು ಪರಿಸರ ಹಾನಿಯಂತರಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಯುವ ಜನತೆ ಶಿಕ್ಷಣದ ಜೊತೆಗೆ ಸತ್ಯ, ಶಿಸ್ತು, ಸೇವೆ, ಸ್ವಾವಲಂಬನೆ ಮತ್ತು ಜವಾಬ್ದಾರಿಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ದೇಶ ಬದಲಾಗಬೇಕೆಂದು ಕಾಯುವುದಕ್ಕಿಂತ ನಮ್ಮಿಂದಲೇ ಬದಲಾವಣೆಯನ್ನು ಆರಂಭಿಸುವುದು ಗಾಂಧೀಜಿಯವರ ಚಿಂತನೆಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ.
ದೇಶದ ಇತಿಹಾಸದಲ್ಲಿ ಅನೇಕ ಮಹಾನ್ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದನ್ನು ಕಾಣಬಹುದಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದ್ದಲ್ಲದೇ ಮನುಷ್ಯನು ಹೇಗೆ ಬದುಕಬೇಕೆಂಬುದನ್ನು ತಿಳಿಸಿಕೊಟ್ಟವರು ಗಾಂಧೀಜಿಯವರು. ಸತ್ಯ, ಅಹಿಂಸೆ, ಪ್ರೀತಿ, ತ್ಯಾಗ, ಸ್ವಾವಲಂಬನೆ , ಶಿಸ್ತು ಮತ್ತು ಸರಳತೆ ಅವರ ಜೀವನದ ಮೌಲ್ಯಗಳಾಗಿದ್ದವು.
ಗಾಂಧೀಜಿಯವರ ಜೀವನ ಸರಳವಾಗಿತ್ತು. ಆದರೆ ಚಿಂತನೆಗಳು ಆಳವಾಗಿದ್ದವು. ನಡೆ-ನುಡಿ ಸರಳವಾಗಿತ್ತು. ಆದರೆ ಗುರಿ ದೊಡ್ಡದಾಗಿತ್ತು. ಗಾಂಧೀಜಿಯವರ ಸರಳ ಜೀವನವು ಕೇವಲ ಒಂದು ಜೀವನ ಶೈಲಿಯಲ್ಲ. ಅದು ಒಂದು ಚಿಂತನೆ, ನೈತಿಕ ತತ್ವ, ಸಾಮಾಜಿಕ ಸಂದೇಶ ಎಂದು ಹೇಳಬಹುದಾಗಿದೆ.
ಗಾಂಧೀಜಿಯವರ ದೃಷ್ಟಿಯಲ್ಲಿ ಸರಳ ಜೀವನವೆಂದರ ಅಗತ್ಯವಿರುವಷ್ಟು ಮಾತ್ರ ಹೊಂದುವುದು, ಅನಗತ್ಯ ಆಸೆಗಳನ್ನು ನಿಯಂತ್ರಿಸುವುದು, ಶ್ರಮವನ್ನು ಗೌರವಿಸುವುದು, ಸತ್ಯವನ್ನು ಪಾಲಿಸುವುದು, ಇತರರ ನೋವನ್ನು ಅರ್ಥಮಾಡಿಕೊಳ್ಳುವುದು, ಸ್ವಾವಲಂಬಿಯಾಗುವುದು, ಪ್ರಕೃತಿಯ ಸಂಪನ್ಮೂಲಗಳನ್ನು ಗೌರವಿಸುವುದು, ಸಮಾಜದ ಒಳಿತಿಗಾಗಿ ಬದುಕುವುದಾಗಿದೆ.
ಗಾಂಧೀಜಿಯವರ ಸರಳತೆ ನನ್ನ ಬಳಿ ಎಷ್ಟು ಇದೆ ಎಂಬ ಪ್ರಶ್ನೆಗಿಂತ ನನ್ನ ಜೀವನದಿಂದ ಇತರರಿಗೆ ಏನು ಪ್ರಯೋಜನ ಎಂಬ ಪ್ರಶ್ನೆಗೆ ಹೆಚ್ಚಿನ ಮಹತ್ವ ನೀಡುತ್ತಿವೆ.
ಜೀವನದ ಗುಣಮಟ್ಟ ನಮ್ಮ ಬಳಿ ಇರುವ ವಸ್ತುಗಳ ಸಂಖ್ಯೆಯಿಂದ ಅಲ್ಲ: ನಮ್ಮ ಚಿಂತನೆಯ ಗುಣಮಟ್ಟ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯಿಂದ ನಿರ್ಧರಿಸುತ್ತದೆ.
ಗಾಂಧೀಜಿಯವರು ಗ್ರಾಮ ಸ್ವರಾಜ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದರು. ಭಾರತದ ಶಕ್ತಿ ಗ್ರಾಮಗಳಲ್ಲಲಿದೆ ಎಂದು ಅವರು ದೃಢವಾಗಿ ನಂಬಿದ್ದರು. ಭಾರತದ ಪ್ರಜೆಗಳು ಕೇವಲ ಮತದಾನ ಮಾಡಿ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಬಾರದು. ಆಡಳಿತದಲ್ಲಿ ನಿರಂತರವಾಗಿ ಭಾಗವಹಿಸಬೇಕು. ರಾಜಕೀಯ ನಾಯಕರಿಗೆ ಮಾರ್ಗದರ್ಶನ ನೀಡಬೇಕು. ರಾಜಕಾರಣಿಗಳು ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡುತ್ತಿದ್ದಾರೆ ಅಥವಾ ಇಲ್ಲವೇ ಇದರ ಕುರಿತು ಜಾಗೃತಿ ವಹಿಸಬೇಕು. ಪ್ರಗತಿಪರ ಕಾರ್ಯಗಳ ಬಗ್ಗೆ ರಾಜಕೀಯ ನಾಯಕರಿಗೆ ತಿಳಿಸಬೇಕು. ಒಂದು ಉತ್ತಮವಾದ ರಾಷ್ಟç ನಿರ್ಮಾಣ ಮಾಡುವುದು ಸರ್ಕಾರದಷ್ಟೇ ಅಲ್ಲ ಅದು ಭಾರತದ ಪ್ರತಿಯೊಬ್ಬ ಪ್ರಜೆಗಳದ್ದು ಆಗಿದೆ.
ಭಾರತವು ವೈವಿಧ್ಯತೆಯಲ್ಲಿ ಏಕತೆಯ ದೇಶವಾಗಿದೆ. ಇಲ್ಲಿ ವಿವಿಧ ಭಾಷೆ, ಧರ್ಮ , ಸಂಸ್ಕೃತಿ ಮತ್ತು ಸಂಪ್ರದಾಯಗಳ ಜನರು ಒಟ್ಟಾಗಿ ಬದುಕುತ್ತಿದ್ದಾರೆ. ಇಂತಹ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಗೌರವ , ಸಮಾನ ಅವಕಾಶ ಮತ್ತು ನ್ಯಾಯ ದೊರೆಯುವುದು ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಅಸಮಾನತೆಯ ನಿರ್ಮೂಲನೆ ಕೇವಲ ಸರ್ಕಾರದ ಜವಾಭ್ದಾರಿಯಲ್ಲಿ , ಅದು ಪ್ರತಿಯೊಬ್ಬ ನಾಗರಿಕನರ ನೈತಿಕ ಕರ್ತವ್ಯವೂ ಆಗಿದೆ. ಅಸಮಾನತೆಯ ವಿರುದ್ಧ ಹೋರಾಡಿದ ಮಹಾನ್ ನಾಯಕರಲ್ಲಿ ಮಹಾತ್ಮ ಗಾಂಧೀಜಿಯವರ ಸ್ಥಾನ ವಿಶಿಷ್ಟವಾಗಿತ್ತು. ಅವರ ದೃಷ್ಟಿಯಲ್ಲಿ ಸ್ವರಾಜ್ಯವೆಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆಯುವುದಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗೌರವದಿಂದ ಬದುಕುವಂತಹ ಭಾರತ ನಿರ್ಮಾಣವಾಗಬೇಕು ಎಂಬುದು ಅವರ ಕನಸಾಗಿತ್ತು. ಗಾಂಧೀಜಿಯವರ ಸರ್ವೋದಯದ ಪರಿಕಲ್ಪನೆಯ ಅರ್ಥವೇ ಎಲ್ಲರ ಉದಯ, ಎಲ್ಲರ ಕಲ್ಯಾಣ, ಅವರ ಸಾಮಾಜಿಕ ಚಿಂತನೆಯ ಪ್ರಮುಖ ಅಂಶಗಳಲ್ಲಿ ಅಸ್ಪೃಶ್ಯತೆಯ ನಿರ್ಮೂಲನೆ, ಮಹಿಳೆಯರ ಉನ್ನತಿ, ಶಿಕ್ಷಣ ಮತ್ತು ಆರ್ಥಿಕ ಸಮಾನತೆ ಸೇರಿದ್ದವು. ಅವರ ನಿರ್ಮಾಣಾತ್ಮಕ ಕಾರ್ಯಕ್ರಮದಲ್ಲಿಯೂ ಅಸ್ಪೃಶ್ಯತೆಯ ನಿರ್ಮೂಲನೆ ಮತ್ತು ಆರ್ಥಿಕ ಸಮಾನತೆಗೆ ಪ್ರಮುಖ ಸ್ಥಾನವಿತ್ತು.
ಗಾಂಧೀಜಿಯವರ ಜೀವನದಲ್ಲಿ ಸತ್ಯಕ್ಕೆ ಅತ್ಯಂತ ಮಹತ್ವವಿತ್ತು. ಅವರು ತಮ್ಮ ಜೀವನವನ್ನೇ ಸತ್ಯದ ಪ್ರಯೋಗಗಳು ಎಂದು ಕಂಡರು. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ಅವರು ಹಿಂದೆ ಸರಿಯಲಿಲ್ಲ. ಇದರಿಂದ ನಮಗೆ ಒಂದು ಮಹತ್ವದ ಪಾಠ ಸಿಗುತ್ತದೆ. ತಪ್ಪು ಮಾಡುವುದು ಮಾನವ ಸಹಜ ಗುಣ: ಆದರೆ ತಪ್ಪನ್ನು ಮರೆಮಾಚುವುದು ವ್ಯಕ್ತಿತ್ವದ ದೌರ್ಬಲ್ಯ. ತಪ್ಪನ್ನು ತಿದ್ದಿ ನಡೆಯುವುದೇ ನಿಜವಾದ ಮನುಷ್ಯನ ಲಕ್ಷಣವಾಗಿದೆ. ಮನುಷ್ಯನ ಜೀವನಕ್ಕೆ ದಾರಿ ತೋರಿಸುವ ಅನೇಕ ಮೌಲ್ಯಗಳಿವೆ. ಆದರೆ ಅವುಗಳಲ್ಲಿ ಸತ್ಯ ಮತ್ತು ಅಹಿಂಸೆ ಅತ್ಯಂತ ಶ್ರೇಷ್ಠವಾದವುಗಳು. ಸತ್ಯವು ನಮ್ಮ ಮಾತು ಮತ್ತು ನಡೆಗೆ ಪ್ರಾಮಾಣಿಕತೆಯನ್ನು ನೀಡಿದರೆ, ಅಹಿಂಸೆಯು ನಮ್ಮ ಮನಸ್ಸಿಗೆ ಮಾನವೀಯತೆಯನ್ನು ನೀಡುತ್ತದೆ. ಮಹಾತ್ಮ ಗಾಂಧೀಜಿಯವರು ಈ ಎರಡು ಮೌಲ್ಯಗಳನ್ನು ಕೇವಲ ಉಪದೇಶಿಸಲಿಲ್ಲ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಗತ್ತಿಗೆ ತೋರಿಸಿದರು. ಮಾತಿಗೆ ತಕ್ಕಂತೆ ಕೃತಿಯಲ್ಲಿಯೂ ಸತ್ಯ ನಿಷ್ಟೆ ತೋರಿಸಿದರು.
ಗಾಂಧೀಜಿಯವರಿಗೆ ಅಹಿಂಸೆ ಮತ್ತು ಸತ್ಯ ಕೇವಲ ಆದರ್ಶಗಳಾಗಿರಲಿಲ್ಲ: ಅವು ಅವರ ಬದುಕಿನ ಉಸಿರಾಗಿದ್ದವು. ಅಹಿಂಸೆ ಎಂದರೆ ಕೋಪದ ಮೇಲೆ ಜಯ. ನನ್ನ ಜೀವನದಲ್ಲಿ ಅಹಿಂಸೆಯನ್ನು ಅನುಸರಿಸುವ ಮೊದಲ ಹೆಜ್ಜೆ ನನ್ನ ಕೋಪವನ್ನು ನಿಯಂತ್ರಿಸುವುದು. ನನಗೆ ಯಾರಾದರೂ ನೋವುಂಟು ಮಾಡಿದಾಗ ತಕ್ಷಣ ಕಠಿಣವಾಗಿ ಪ್ರತಿಕ್ರಿಯಿಸುವುದು ಸುಲಭ. ಆದರೆ ಒಂದು ಕ್ಷಣ ನಿಂತು ಯೋಚಿಸಿ ಶಾಂತವಾಗಿ ಉತ್ತರಿಸುವುದು ನಿಜವಾದ ಶಕ್ತಿಯಾಗಿದೆ. ಇತರರನ್ನು ಸೋಲಿಸುವುದಕ್ಕಿಂತ ಸ್ವಂತ ಕೋಪವನ್ನು ಗೆಲ್ಲುವುದು ದೊಡ್ಡ ಜಯ. ಕೆಟ್ಟ ಪದಗಳಿಂದ ನಿಂದಿಸುವ ಬದಲು ಶಾಂತವಾಗಿ ಮಾತನಾಡುವುದು ಅಹಿಂಸೆಯಾಗಿದೆ.
ಮಹಾತ್ಮ ಗಾಂಧೀಜಿಯವರ ಕನಸಿನ ಸಮಾಜದಲ್ಲಿ ಯಾರೂ ಮೇಲು ಕೀಳು ಎಂಬ ಬೇಧವಿಲ್ಲದೇ ಎಲ್ಲರೂ ಸಮಾನವಾಗಿ ಬದುಕಬೇಕೆಂಬುದಾಗಿತ್ತು. ಗಾಂಧೀಜಿಯವರ ಆದರ್ಶಗಳು ಇಂದಿಗೂ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುತ್ತಿವೆ. ಗಾಂಧೀಜಿಯವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ.
ವಾರ್ತಾ ಮತ್ತು ಸಾ.ಸಂ.ಇಲಾಖೆಯ ಸಹಾಯಕ ನಿರ್ದೇಶಕರಾ ವಸಂತ ಮಡ್ಲೂರು ಅವರ ವಿಶೇಷ ಲೇಖನ.
---------------
ಹಿಂದೂಸ್ತಾನ್ ಸಮಾಚಾರ್ / lalita MP