ಹಿರಿಯ ನಾಗರೀಕರ ರಕ್ಷಣೆಗೆ ಕಾನೂನು ರೂಪಿಸಲಾಗಿದೆ ; ನ್ಯಾಯಮೂರ್ತಿ ಪ್ರಭು ಎನ್. ಬಡಿಗೇರ
ಹಿರಿಯ ನಾಗರೀಕರ ರಕ್ಷಣೆಗೆ ಕಾನೂನು ರೂಪಿಸಲಾಗಿದೆ ; ನ್ಯಾಯಮೂರ್ತಿ ಪ್ರಭು ಎನ್. ಬಡಿಗೇರ
ಕೋಲಾರದಲ್ಲಿ ನಡೆದ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಪ್ರಭು ಎನ್. ಬಡಿಗೇರ ಉದ್ಘಾಟಿಸಿದರು.


ಕೋಲಾರ, ೦೧ ಅಕ್ಟೋಬರ್: (ಹಿ.ಸ)

ಹಿರಿಯರ ನಾಗರೀಕರ ರಕ್ಷಣೆಗೆ ಕಾನೂನು ರೂಪಿಸಲಾಗಿದೆ. ಅವರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಸಿಕೊಡುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್ ಬಡಿಗೇರ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೋಲಾರದಲ್ಲಿ ನಡೆದ 'ವಿಶ್ವ ಹಿರಿಯ ನಾಗರೀಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಯಸ್ಸಾದಂತೆ ದೈಹಿಕ ಶಕ್ತಿ ಕುಂದಬಹುದು. ಆದರೆ ಮಾನಸಿಕವಾಗಿ ಲವಲವಿಕೆಯಿಂದಿರಬೇಕು. ಸುಮ್ಮನೆ ಕೂರುವುದರಿಂದ ರೋಗಗಳು ಬರುತ್ತವೆ. ಆದ್ದರಿಂದ ನಿರಂತರವಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಯೋಗ, ಧ್ಯಾನ ಹಾಗೂ ವಾಕಿಂಗ್ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಮನೆಯಲ್ಲಿ ಅಥವಾ ಹೊರಗಡೆ ಹೋಗುವಾಗ ಹೆಚ್ಚಿನ ಚಿನ್ನಾಭರಣಗಳನ್ನು ಧರಿಸುವುದನ್ನು ತಪ್ಪಿಸಬೇಕು. ಇದರಿಂದ ಕಳ್ಳರ ದಾಳಿಗೆ ತುತ್ತಾಗುವ ಅಪಾಯವಿರುತ್ತದೆ ಎಂದು ಹಿರಿಯರಿಗೆ ಎಚ್ಚರಿಸಿದರು. ಹಿರಿಯರ ಪಿಂಚಣಿ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು ಸರ್ಕಾರ ಹೆಚ್ಚಿಸಿದ್ದು, ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ೨೦೦೭ ರಲ್ಲಿ ಜಾರಿಗೆ ಬಂದಿರುವ ಕಾಯ್ದೆಯ ಬಗ್ಗೆ ಮಾತನಾಡಿದ ಅವರು, ಮಕ್ಕಳು ಆಸ್ತಿ ಬರೆಸಿಕೊಂಡ ನಂತರ ಪೋಷಕರನ್ನು ನಿರ್ಲಕ್ಷಿಸಿದರೆ, ಹಿರಿಯ ನಾಗರಿಕರು ಉಪ ವಿಭಾಗಾಧಿಕಾರಿಗಳ ಮುಂದೆ ದೂರು ದಾಖಲಿಸಬಹುದು. ಈ ದೂರುಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡಬೇಕೆಂಬ ನಿಯಮವಿದ್ದು, ಹಿರಿಯರು ತಮ್ಮ ಆಸ್ತಿಯನ್ನು ಕಾನೂನುಬದ್ಧವಾಗಿ ವಾಪಸ್ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಬಸ್ ಮತ್ತು ರೈಲು ಪ್ರಯಾಣದಲ್ಲಿ ಹಿರಿಯರಿಗೆ ರಿಯಾಯಿತಿ ಇದೆ. ದೀರ್ಘಾವಧಿಯ ರೈಲು ಪ್ರಯಾಣದಲ್ಲಿ ಹಿರಿಯರ ಜೊತೆಗಿರುವ ಸಹಾಯಕರಿಗೂ ರಿಯಾಯಿತಿ ದೊರೆಯುತ್ತದೆ. ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿಭಾಗ ಇರಬೇಕು ಹಾಗೂ ಇತರ ರೋಗಿಗಳೊಂದಿಗೆ ಅವರನ್ನು ಸೇರಿಸದೆ ಆದ್ಯತೆಯ ಮೇರೆಗೆ ತ್ವರಿತವಾಗಿ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಎಚ್.ವಿ. ಸುಬ್ರಮಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್, ಜಿಲ್ಲಾಧಿಕಾರಿಗಳ ಕಛೇರಿಯ ತಹಸೀಲ್ದಾರ್ ಶ್ರೀನಿವಾಸ್ ರೆಡ್ಡಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆರ್. ಮಂಜುಳಾ, ಕೋಲಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್ ಹಾಗೂ ಹಿರಿಯ ನಾಗರೀಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande