ರಾಜ್ಯದಲ್ಲಿ ಮತದಾರರ ಪಟ್ಟಿ ಅಳಿಸುವ ಷಡ್ಯಂತ್ರ: ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ: ಡಿ.ಕೆ.ಶಿವಕುಮಾರ್
ಬೆಂಗಳೂರು, 01 ಅಕ್ಟೋಬರ್ (ಹಿ.ಸ.): ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಪೂರ್ವಮುದ್ರಿತ ವಿವರಗಳನ್ನು ಒಳಗೊಂಡ ನಮೂನೆ–7 ಅರ್ಜಿಗಳನ್ನು ಸಲ್ಲಿಸಿರುವವರ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಪೂರ್ವಮುದ್ರಿತ ವಿವರಗಳನ್ನು ಒಳಗೊಂಡ ನಮೂನೆ–7 ಅರ್ಜಿಗಳನ್ನು ಸಲ್ಲಿಸಿರುವವರ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಬಿಜೆಪಿ ಮತ್ತು ಜನತಾದಳದ ನಾಯಕರು ಹಾಗೂ ಕಾರ್ಯಕರ್ತರು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಹಲವು ಜಿಲ್ಲೆಗಳ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪೂರ್ವಮುದ್ರಿತ ಮಾಹಿತಿಗಳನ್ನು ಒಳಗೊಂಡ ನಮೂನೆ–7 ಅರ್ಜಿಗಳನ್ನು ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿ, ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಿರುವುದು ಪತ್ತೆಯಾಗಿದೆ. ಇದು ಕ್ರಿಮಿನಲ್ ಸಂಚಾಗಿದ್ದು, ಕೋಮು ದ್ವೇಷ ಮೂಡಿಸಿ, ಕೋಮು ಸಾಮರಸ್ಯ ಕದಡುವ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಅವರು ಆರೋಪಿಸಿದರು.

ಸಚಿವರ ಕ್ಷೇತ್ರಗಳಲ್ಲೇ ಸಾವಿರಾರು ಮತ ಅಳಿಸಲು ಪಿತೂರಿ

ಬಬಲೇಶ್ವರದಲ್ಲಿ 1,634ಕ್ಕೂ ಅಧಿಕ ಇಂತಹ ಅರ್ಜಿಗಳನ್ನು ಸಲ್ಲಿಸಲಾಗಿದೆ. ವಿಜಯಪುರದಲ್ಲಿ 14 ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಭಾಲ್ಕಿಯಲ್ಲಿ 3,244 ಅರ್ಜಿಗಳನ್ನು ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ. ಭಾಲ್ಕಿ, ನರಸಿಂಹರಾಜಪುರ, ಬೆಳಗಾವಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ನಮೂನೆ–7 ಸಲ್ಲಿಸಿರುವುದು ಕಂಡುಬಂದಿದೆ ಎಂದು ಶಿವಕುಮಾರ್ ತಿಳಿಸಿದರು.

ಕೆಲವು ಕ್ಷೇತ್ರಗಳಲ್ಲಿ 5ರಿಂದ 10 ಸಾವಿರ ಮತಗಳನ್ನು ಅಳಿಸುವ ಷಡ್ಯಂತ್ರ ನಡೆದಿರುವ ಮಾಹಿತಿ ಲಭ್ಯವಾಗಿದೆ. ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಸಮಾಜದ ಸದಸ್ಯರು ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.

ಬಿಜೆಪಿಯ ಅಧಿಕೃತ ಕಾರ್ಯಕರ್ತರು ತಮ್ಮ ಹೆಸರಿನಲ್ಲಿ ನೂರಾರು ನಮೂನೆ–7 ಅರ್ಜಿಗಳನ್ನು ಸಲ್ಲಿಸಿರುವುದು ಪತ್ತೆಯಾಗಿದೆ. ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಮೂನೆ–7ರಲ್ಲಿ ಮಾಹಿತಿಯನ್ನು ಮುದ್ರಿಸಿ ಈ ಕಾರ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಅರ್ಜಿಗಳು ಎಲ್ಲಿ ಮುದ್ರಿತವಾಗುತ್ತಿವೆ, ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಚುನಾವಣಾ ಆಯೋಗ ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

50 ಲಕ್ಷ ಮತದಾರರನ್ನು ಅಳಿಸುವ ಷಡ್ಯಂತ್ರ: ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಈಗಾಗಲೇ 1.07 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಹಾಗೂ 45 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ. ಇದರ ಬಳಿಕವೂ ಸುಮಾರು 50 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಬಿಜೆಪಿ ಕಾರ್ಯಕರ್ತರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.

ರಾಜ್ಯ ಚುನಾವಣಾ ಆಯೋಗ ತಕ್ಷಣ ಎಲ್ಲ ಪ್ರಕರಣಗಳಲ್ಲೂ ಪ್ರಥಮ ಮಾಹಿತಿ ವರದಿ ದಾಖಲಿಸಿ, ಸಮಗ್ರ ತನಿಖೆ ಆರಂಭಿಸಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಿಜೆಪಿ ಮತ್ತು ಜನತಾದಳದ ನಾಯಕರ ಈ ಷಡ್ಯಂತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಡೆಯುತ್ತಿರುವ ಕೃತ್ಯದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.

ಆಯೋಗದ ಕಚೇರಿ ಎದುರು ಧರಣಿ ಎಚ್ಚರಿಕೆ

ರಾಜ್ಯ ಚುನಾವಣಾ ಆಯೋಗ ತಕ್ಷಣ ತನಿಖೆಗೆ ಆದೇಶಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಆಯೋಗದ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಗುವುದು. ಆಯೋಗ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಅಲ್ಲಿಯೇ ಸಂಪುಟ ಸಚಿವರೊಂದಿಗೆ ಧರಣಿ ನಡೆಸಲಾಗುವುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲದೆ ಅಕ್ರಮ: ಆರೋಪ

ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಹಾಗೂ ಜನತಾದಳ ಇಂತಹ ಕೃತ್ಯಗಳಲ್ಲಿ ತೊಡಗಿವೆ ಎಂದು ಅವರು ಆರೋಪಿಸಿದರು. ಕರ್ನಾಟಕದಲ್ಲಿ ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಅಲ್ಪಸಂಖ್ಯಾತರು ಹಾಗೂ ಬಡವರ ಹಿತರಕ್ಷಣೆ, ಮತದಾನದ ಹಕ್ಕಿನ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ತಾನು ಅರ್ಹನಲ್ಲ. ಮುಖ್ಯಮಂತ್ರಿಯಾಗಿ ಪ್ರತಿಯೊಂದು ವರ್ಗದ ಮತದಾರರ ಹಕ್ಕನ್ನು ರಕ್ಷಿಸುವುದು ತನ್ನ ಜವಾಬ್ದಾರಿ ಎಂದು ಹೇಳಿದರು.

ವಿಶೇಷ ತೀವ್ರ ಪರಿಷ್ಕರಣೆ ರದ್ದಾಗಬೇಕು

ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರಿಗೆ ಮಾಹಿತಿ ಇಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಆರೋಪಿಸಿದರು. ವಿಶೇಷ ತೀವ್ರ ಪರಿಷ್ಕರಣೆ ದೇಶದ ಅತಿ ದೊಡ್ಡ ವಂಚನೆಯಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ವಿಶೇಷ ತೀವ್ರ ಪರಿಷ್ಕರಣೆ ಆರಂಭವಾದ ಬಳಿಕ ಸರ್ಕಾರದ ವತಿಯಿಂದ ಚುನಾವಣಾ ಆಯೋಗಕ್ಕೆ ಎಲ್ಲ ರೀತಿಯ ಬೆಂಬಲ ಮತ್ತು ಸಹಕಾರ ನೀಡಲಾಗಿದೆ. ಪಕ್ಷದ ವತಿಯಿಂದ 54 ಸಾವಿರ ಮತಗಟ್ಟೆ ಮಟ್ಟದ ಏಜೆಂಟ್‌ಗಳನ್ನು ನೇಮಕ ಮಾಡಲಾಗಿದೆ. ಆಯೋಗದ ಕಾರ್ಯಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಿದೆ. ಆದರೆ ಅರ್ಹ ಮತದಾರರನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕುವ ಯಾವುದೇ ಪ್ರಯತ್ನ ಯಶಸ್ವಿಯಾಗಲು ಬಿಡುವುದಿಲ್ಲ ಎಂದರು.

ವಿಶೇಷ ತೀವ್ರ ಪರಿಷ್ಕರಣೆ ರದ್ದುಗೊಳಿಸಿ, ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಒದಗಿಸಲು ಕ್ರಮ ಕೈಗೊಳ್ಳಬೇಕು. ಇದರಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹೇರಿದವರನ್ನು ಪತ್ತೆಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande