ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ರಾಜಕೀಯ ಒತ್ತಡ: ಆರ್.ಅಶೋಕ ಆಕ್ರೋಶ
ಬೆಂಗಳೂರು, 01 ಅಕ್ಟೋಬರ್ (ಹಿ.ಸ.): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗದ ಮೇಲೆ ರಾಜಕೀಯ ಒತ್ತಡ ಹೇರುತ್ತಿದ್ದಾರೆ. ಫಾರ್ಮ್‌ 7 ಕುರಿತು ಕಾಂಗ್ರೆಸ್‌ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲ
ಪ್ರತಿಪಕ್ಷ ನಾಯಕ ಶೋಕ ಸಂಗ್ರಹ ಚಿತ್ರ


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗದ ಮೇಲೆ ರಾಜಕೀಯ ಒತ್ತಡ ಹೇರುತ್ತಿದ್ದಾರೆ. ಫಾರ್ಮ್‌ 7 ಕುರಿತು ಕಾಂಗ್ರೆಸ್‌ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದರು. ನೆಹರು ಹಾಗೂ ಇಂದಿರಾಗಾಂಧಿ ಅವರ ಕಾಲದಲ್ಲಿ ಮಾಡಿದಂತೆ ಈಗ ಚುನಾವಣಾಧಿಕಾರಿಗಳ ಮೇಲೆ ನಿಯಂತ್ರಣ ತರಲು ಸಾಧ್ಯವಿಲ್ಲ. ಕಾಂಗ್ರೆಸ್‌ ನಾಯಕರು ಚುನಾವಣಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದಿದ್ದಾರೆ ಎಂದು ಆರೋಪಿಸಿದರು.

ಸಮಸ್ಯೆ ಇದ್ದರೆ ಕಾಂಗ್ರೆಸ್‌ ಕೋರ್ಟ್‌ ಮೊರೆ ಹೋಗಲಿ. ದಾಖಲೆಗಳು ಸರಿಯಾಗಿದ್ದರೆ ಚುನಾವಣಾ ಆಯೋಗಕ್ಕೆ ಕೋರ್ಟ್‌ ಸೂಕ್ತ ಸೂಚನೆ ನೀಡುತ್ತದೆ. ಯಾವುದೇ ಧರ್ಮಕ್ಕೆ ಸೇರಿದವರಾದರೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ರದ್ದಾಗಬಾರದು ಎಂಬುದು ಬಿಜೆಪಿಯ ನಿಲುವು. ಆದರೆ ನಾಲ್ಕೈದು ಕಡೆ ಮತದಾನ ಮಾಡುವವರ ರಕ್ಷಣೆಗೆ ಕಾಂಗ್ರೆಸ್‌ ನಿಂತಿರುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಜ್ಜಯ್ಯನವರ ಮೇಲೆ ಪ್ರಮಾಣ ತೆಗೆದುಕೊಂಡು ಮುಖ್ಯಮಂತ್ರಿಯಾದ ಬಳಿಕ ಕೇವಲ ಕಾಂಗ್ರೆಸ್‌ ಪಕ್ಷಕ್ಕಾಗಿ ಕೆಲಸ ಮಾಡಬಾರದು. ಸರ್ಕಾರದ ಕೆಲಸ ಮಾಡುವುದನ್ನು ಬಿಟ್ಟು ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯಿಂದ 15 ಲಕ್ಷ ಜನರ ಮತದಾನದ ಹಕ್ಕು ರದ್ದು ಮಾಡಿಸಲಾಗಿದೆ ಎಂಬ ಆರೋಪ ಸುಳ್ಳು. ಫಾರ್ಮ್‌ 7ರ ಅಡಿ 25 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳುತ್ತಿರುವಾಗ 15 ಲಕ್ಷ ಹೆಸರುಗಳು ಹೇಗೆ ರದ್ದಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ದೇಶದಲ್ಲಿ ಎರಡು ಕೋಟಿ ಬಾಂಗ್ಲಾದೇಶದ ನಿವಾಸಿಗಳಿದ್ದಾರೆ. ಅವರಿಗೆ ಮತದಾನದ ಹಕ್ಕು ನೀಡಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆದಾಗ ಬಾಂಗ್ಲಾದೇಶದ ನಿವಾಸಿಗಳು ತಮ್ಮ ದೇಶಕ್ಕೆ ಮರಳಿದ್ದರು ಎಂಬ ವೀಡಿಯೊಗಳಿವೆ. ಇಂತಹವರ ಪರವಾಗಿ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಇತರರು ನಡೆಸುತ್ತಿರುವ ಧರಣಿಯೇ ಅಕ್ರಮವಾಗಿದೆ. ಪೊಲೀಸರು ಅವರನ್ನು ಮೊದಲು ಬಂಧಿಸಬೇಕು. ಬಿಜೆಪಿ ಧರಣಿ ನಡೆಸಿದಾಗ ಬಂಧಿಸುವ ಪೊಲೀಸರು ಕಾಂಗ್ರೆಸ್‌ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆ ತೆಗೆದುಕೊಂಡ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಫಾರ್ಮ್‌ 7ಗಳನ್ನು ಚುನಾವಣಾ ಆಯೋಗ ಸ್ವೀಕರಿಸಿ ಪರಿಶೀಲಿಸುತ್ತಿದೆ. ತಮ್ಮ ಮಾಹಿತಿಯ ಪ್ರಕಾರ, ಅರ್ಜಿಯಲ್ಲಿ ಉಲ್ಲೇಖಿಸಿದಂತೆ ಯಾರ ಹೆಸರನ್ನೂ ರದ್ದು ಮಾಡಿಲ್ಲ. ಬೆಳಗಾವಿಯ ವೀರಭದ್ರನಗರದಲ್ಲಿ ಸಾಮೂಹಿಕವಾಗಿ ಸಲ್ಲಿಸಲಾದ ಫಾರ್ಮ್‌ 7ಗಳನ್ನು ತಿರಸ್ಕರಿಸಲಾಗಿದೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಹಾಗೂ ಪಡಿತರ ಚೀಟಿಗಳ ಮರುಪರಿಶೀಲನೆ ನಡೆಸುತ್ತಿದೆ. ವಿಶೇಷಚೇತನರ ಪಿಂಚಣಿಯನ್ನೂ ಪರಿಶೀಲಿಸಲಾಗುತ್ತಿದೆ. ಎಲ್ಲ ವಿವರಗಳನ್ನು ಪಡೆಯಲಾಗುತ್ತಿದೆ. ಆದರೆ ಚುನಾವಣಾ ಆಯೋಗ ಮಾತ್ರ ಸ್ವತಂತ್ರವಾಗಿ ಕೆಲಸ ಮಾಡಬಾರದು ಎಂಬ ರೀತಿಯಲ್ಲಿ ಕಾಂಗ್ರೆಸ್‌ ನಾಯಕರು ಧರಣಿ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಪೊಲೀಸರು ಎಲ್ಲಿದ್ದಾರೆ?

ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಪೊಲೀಸರು ಈಗ ಎಲ್ಲಿದ್ದಾರೆ ಎಂದು ಆರ್‌.ಅಶೋಕ ಪ್ರಶ್ನಿಸಿದರು. ಕಾಂಗ್ರೆಸ್‌ ನಾಯಕರು ಬೇಕಾದಂತೆ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಕಾಂಗ್ರೆಸ್‌ ನಾಯಕರೇನು ಬೀಡಾಡಿ ದನಗಳಾ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ದಂಗೆ ಏಳುವ ಸ್ಥಿತಿಯಲ್ಲಿದ್ದಾರೆ. ಈ ವಿಚಾರದಿಂದ ವಿಷಯಾಂತರ ಮಾಡಲು ಕಾಂಗ್ರೆಸ್‌ ನಾಯಕರು ಕಪಟ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸುವವರನ್ನು ತಡೆಯುವ ಅಧಿಕಾರವೂ ಪೊಲೀಸರಿಗೆ ಇರುವುದಿಲ್ಲ ಎಂದು ಹೇಳಿದರು.

ಫಾರ್ಮ್‌ 7 ಮುದ್ರಿಸುವುದು ತಪ್ಪಾಗಿದ್ದರೆ ಕಾಂಗ್ರೆಸ್‌ ಕೋರ್ಟ್‌ ಮೊರೆ ಹೋಗಲಿ. ಅದನ್ನು ಬಿಟ್ಟು ಬಿಜೆಪಿ ವಿರುದ್ಧ ಆರೋಪ ಮಾಡಬಾರದು. ಪಾರದರ್ಶಕತೆ ಬೇಕೆಂದರೆ ಎಸ್‌ಐಟಿ ರಚಿಸಲಿ, ಎಫ್‌ಐಆರ್‌ ದಾಖಲಿಸಲಿ ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಲು ಕಾಂಗ್ರೆಸ್‌ ನಾಯಕರಿಗೆ ಅಧಿಕಾರವಿಲ್ಲ. ಚುನಾವಣಾ ಆಯೋಗ ಏನು ಮಾಡಬೇಕು ಎಂಬುದನ್ನು ಅದರ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಏಕೆ ಸೂಚನೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಒಂದು ರಾಜಕೀಯ ಪಕ್ಷವಾಗಿದ್ದು, ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವುದಿಲ್ಲ. ಒಂದು ಕಾಲದಲ್ಲಿ ಇಂದಿರಾಗಾಂಧಿ ಚುನಾವಣಾ ಅಕ್ರಮ ನಡೆಸಿದ್ದರು. ಇಂತಹ ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.

ಫಾರ್ಮ್‌ 7 ಅನ್ನು ಕೇವಲ ಮತಗಟ್ಟೆ ಮಟ್ಟದ ಅಧಿಕಾರಿ-2 ಮಾತ್ರ ನೀಡಬೇಕು ಎಂಬ ನಿಯಮವಿಲ್ಲ. ಕ್ಷೇತ್ರದ ಮತದಾರರೂ ಫಾರ್ಮ್‌ 7 ಸಲ್ಲಿಸಬಹುದು. ಒಂದು ಕೋಟಿ ಮತ ರದ್ದಾಗಿದೆ ಎಂದು ಆರೋಪಿಸಲಾಗುತ್ತಿದೆ. ಎಷ್ಟು ಜನರು ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ತೆರಳಿದ್ದಾರೆ ಎಂಬುದನ್ನು ಕಾಂಗ್ರೆಸ್‌ ನಾಯಕರು ತಿಳಿಸಲಿ ಎಂದರು.

ತಮ್ಮದೇ ಕ್ಷೇತ್ರದ ಒಂದು ಪ್ರದೇಶದಲ್ಲಿ 2,000 ಮತದಾರರಿದ್ದು, ಅವರಲ್ಲಿ 800 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಉಳಿದವರು ತಮ್ಮ ಊರುಗಳಿಗೆ ತೆರಳಿದ್ದಾರೆ. ಇಂತಹ ಬದಲಾವಣೆಗಳನ್ನೇ ಮತದಾರರ ಪಟ್ಟಿಯಲ್ಲಿನ ಅಕ್ರಮ ಎಂದು ಆರೋಪಿಸಬಾರದು. ಮತದಾರರ ಪಟ್ಟಿಯಿಂದ ಹೆಸರು ರದ್ದುಗೊಂಡಿದ್ದರೆ ಸೂಕ್ತ ದಾಖಲೆ ನೀಡಿ ಮರು ಸೇರ್ಪಡೆ ಮಾಡಬಹುದು ಎಂದು ಹೇಳಿದರು.

ಫಾರ್ಮ್‌ 7 ಸಲ್ಲಿಸಿ, ಅದರ ಮೂಲಕ ಮತದಾರರ ಗುರುತಿನ ಚೀಟಿ ಎರಡು ಅಥವಾ ಮೂರು ರಾಜ್ಯಗಳಲ್ಲಿ ಇರುವುದನ್ನು ಪತ್ತೆಹಚ್ಚಿದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬಹುದು. ಒಬ್ಬರಿಗೆ ಒಂದೇ ಸ್ಥಳದಲ್ಲಿ ಮತದಾನದ ಹಕ್ಕು ಇರುವಂತೆ ಮಾಡಬಹುದು ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande