ಎಸ್ಐಆರ್ ಪ್ರಕ್ರಿಯೆಯಲ್ಲಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಿವೆ : ಡಾ.ಜಿ.ಪರಮೇಶ್ವರ
ರಾಜ್ಯದ ಮಳೆ ಕೊರತೆ, ಬೆಳೆಹಾನಿ ಕುರಿತು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಸಂಪೂರ್ಣ ಮಾಹಿತಿ ಒದಗಿಸಲಾಗುವುದು : ಡಿಸಿಎಂ
ಡಿಸಿಎಂ ಪರಮೇಶ್ವರ


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಆಕ್ಷೇಪವನ್ನು ದಾಖಲಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಏರ್ಪಟ್ಟಿರುವ ಗೊಂದಲ, ಬರ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡರು.

ಹಲವು ದಿನಗಳಿಂದ ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ. ಎಎಸ್ ಡಿಡಿಓ ವಿಚಾರದಲ್ಲೂ ಗೊಂದಲ ಉಂಟಾಯ್ತು. ಬದುಕಿರುವವರನ್ನು ಕೂಡ ಮೃತರ ಪಟ್ಟಿಗೆ ಸೇರಿಸಲಾಗಿತ್ತು. ಮತದಾರರಿಗೆ ನೋಟೀಸ್ ನೀಡುವುದರಲ್ಲೂ ಗೊಂದಲಗಳಾಗಿವೆ. ಈಗ ಮುಂದುವರಿದು ಯಾರು ಬೇಕಾದರೂ ಚುನಾವಣಾ ಆಯೋಗಕ್ಕೆ ಫಾರ್ಮ್ 7 ಅರ್ಜಿಯನ್ನು ಸಲ್ಲಿಸಿ ಬೇರೋಬ್ಬ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಬಹುದು ಎಂಬಂತಾಗಿದೆ. ಹೀಗಾಗಿ ದೇಶ್ಯಾದ್ಯಂತ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ವಿರೋಧಿಸಿ ನಮ್ಮ ಪಕ್ಷದ ವತಿಯಿಂದ ಈಗಾಗಲೇ ದೂರನ್ನು ಸಲ್ಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುತ್ತವೆ ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದರು.

ಈ ಕುರಿತಾಗಿ ದೆಹಲಿಯಲ್ಲಿ ಈಗಾಗಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಗಿದೆ. ಚುನಾವಣಾ ಆಯುಕ್ತರನ್ನು ವಜಾಗೊಳಿಸುವ ಕುರಿತು ಪಕ್ಷ ತೀರ್ಮಾನಿಸಿದೆ. ನಮ್ಮ ವರಿಷ್ಠರ ಸೂಚನೆಯಂತೆ ಮುಂದಿನ ನಡೆಗಳನ್ನು ನಿರ್ಧರಿಸುತ್ತೇವೆ. ನಾನು ಕೂಡ ದೆಹಲಿ ಪ್ರವಾಸದ ವೇಳೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ರಾಜ್ಯದ ಅನೇಕ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ದೆಹಲಿ ಭೇಟಿಯ ಬಗ್ಗೆ ತಿಳಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿಗಳನ್ನು ಭೇಟಿಯಾಗಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಕುರಿತಾಗಿ ಮುಖ್ಯಮಂತ್ರಿಗಳು ಪ್ರಧಾನಿಗಳ ಕಛೇರಿಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ದಿನಾಂಕ ನಿಗದಿಯಾದ ಕೂಡಲೇ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದು ರಾಜ್ಯದ ಸ್ಥಿತಿಗತಿಯನ್ನು ಪ್ರಧಾನಿಗಳಿಗೆ ಮನನ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಬರ ಅಧ್ಯಯನ ತಂಡಕ್ಕೆ ಕಳೆದ ಜೂನ್‌ನಿಂದ ಈವರೆಗೆ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. ಕಳೆದ ಒಂದೆರೆಡು ದಿನಗಳಿಂದ ರಾಜ್ಯದ ಕೆಲವೆಡೆಗಳಲ್ಲಿ ಸುರಿಯುತ್ತಿದೆಯಾದರೂ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂಬುದನ್ನು ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande