
ಕೋಲಾರ, ೦೧ ಅಕ್ಟೋಬರ್ (ಹಿ.ಸ) : ಕೋಲಾರ ಜಿಲ್ಲೆಯ ಕೆಲವು ಶಾಸಕರು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಸಮಸ್ಯೆಗಳ ಬಗ್ಗೆ ಸಾಕಷ್ಟು ಗಮನಹರಿಸುತ್ತಿಲ್ಲ. ರೈತರ ಹಿತಾಸಕ್ತಿ ಕಾಪಾಡುವುದು, ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ. ವಿಜಯೇಂದ್ರ ಪ್ರತಿಪಾದಿಸಿದರು.
ಕೆಜಿಎಫ್ ತಾಲ್ಲೂಕಿನ ಬೇತಮಂಗಲದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಜೀವನದ ಸೇವೆಯನ್ನು ಸ್ಮರಿಸುವ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿ ಮಾತನಾಡಿದರು.
ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವುದು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಜ್ಜಾಗುವುದು ಸೇರಿದಂತೆ ಹಲವು ಉದ್ದೇಶಗಳೊಂದಿಗೆ ಯಾತ್ರೆ ಆಯೋಜಿಸಲಾಗಿದೆ.
ಕಳೆದ ೨೦೦೮ರಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ವೈ. ಸಂಪAಗಿ ಅವರು ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ಕೆಜಿಎಫ್ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿತ್ತು. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆತಿತ್ತು ಎಂದು ವಿಜಯೇಂದ್ರ ಸ್ಮರಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ದೊರೆತ ಅನುದಾನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಅವರು, ಪ್ರಸ್ತುತ ಕ್ಷೇತ್ರದ ಅಭಿವೃದ್ಧಿ ಸ್ಥಿತಿಗತಿಯ ಕುರಿತು ಪ್ರಶ್ನೆಗಳನ್ನು ಎತ್ತಿದರು. ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿದೆ. ಅಭಿವೃದ್ಧಿಗೆ ಹಣದ ಕೊರತೆ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್ಸಿ–ಎಸ್ಟಿ ಉಪಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಲಾಗುತ್ತಿದೆ. ಈ ಸಮುದಾಯಗಳ ಕಲ್ಯಾಣಕ್ಕೆ ಮೀಸಲಾದ ಹಣವು ಉದ್ದೇಶಿತ ಯೋಜನೆಗಳಿಗೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ೨೫ ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮದ ಮೂಲಕ ಜನಸೇವೆಯ ಮಹತ್ವವನ್ನು ಸಾರುವುದರ ಜೊತೆಗೆ, ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶವಾಗಿದೆ. ಅಭಿವೃದ್ಧಿ, ಜನಪರ ಆಡಳಿತ ಮತ್ತು ರೈತರ ಹಿತಾಸಕ್ತಿಯ ವಿಚಾರಗಳನ್ನು ಮುಂದಿಟ್ಟುಕೊAಡು ಬಿಜೆಪಿ ಕಾರ್ಯಕರ್ತರು ಜನರ ನಡುವೆ ಕೆಲಸ ಮಾಡಬೇಕು ಎಂಬ ಆಶಯವನ್ನು ವಿಜಯೇಂದ್ರ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್