
ಕೋಲಾರ, ೦೧ ಅಕ್ಟೋಬರ್ (ಹಿ.ಸ) : ಎಸ್.ಐ..ಆರ್ ಬಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕ ಹಕ್ಕು ಇಲ್ಲ. ಇದುವರೆಗೆ ಹವಾನಿಯಂತ್ರಿತ ಮನೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ನಾಯಕರನ್ನು ಬಿಸಿಲಿಗೆ ತರಲಾಗಿದೆ ಚುನಾವಣಾ ಆಯೋಗ ಶಾಸನಬದ್ದ ಸಂಸ್ಥೆಯಾಗಿದೆ. ಸಂಸ್ಥೆ ತನ್ನ ಕೆಲಸವನ್ನು ತಾನು ಮಾಡುತ್ತಿದೆ. ಆದರೆ ಕಾಂಗ್ರೆಸ್ನವರಿಗೆ ಚುನಾವಣಾ ಆಯೋಗವನ್ನು ಟೀಕೆ ಮಾಡುವುದೇ ನಿತ್ಯ ಕೆಲಸವಾಗಿದೆ ಎಂದು ಬಿಜೆಪಿ ಕರ್ನಾಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ಪ್ರಧಾನ ಮಂತ್ರಿಗಳು ಹದಿನೇಳು ವರ್ಷ ಅಧಿಕಾರ ಪೂರೈಸಿದ್ದು, ಇದರ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನ ಕೈಗೊಳ್ಳಲಾಗಿದ್ದು, ಮುಳಬಾಗಿಲು ತಾಲೂಕಿನ ಪುರಾಣ ಪ್ರಸಿದ್ಧ ಕುರುಡುಮಲೆ ಗ್ರಾಮದ ವಿನಾಯಕ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ವಿಕಸಿತ ಭಾರತ ಸೇವಾ ಸಂಕಲ್ಪ ಅಭಿಯಾನ ಯದ ರಾಜ್ಯ ಪ್ರವಾಸಕ್ಕೆ ಮೊದಲ ಹಂತ ಪ್ರಾರಂಭಿಸಲಾಯಿತು.
ಮಂದಿನ ೨೦೪೭ರ ವೇಳೆಗೆ ಭಾರತ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಆಗಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಅವರು ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ಸಿನ ಜನವಿರೋಧಿ ನೀತಿಯಿಂದ ಜನ ದಂಗೆ ಏಳುವ ಕಾಲ ಬಂದಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿಯ ಕಾರ್ಯಕ್ರಮ ಮತ್ತು ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತೀವ್ರ ಹತಾಶರಾದ ರಾಹುಲ್ ಗಾಂಧಿ ಬಾಯಿಗೆ ಬಂದ0ತೆ ಮಾತನಾಡುತ್ತಿದ್ದಾರೆ. ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಬಿಜೆಪಿ ಶಾಸಕರು ಆಯ್ಕೆಯಾಗಬೇಕು ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಮುಖಂಡರಾದ ವಿಜಯಕುಮಾರ್, ಮಹೇಶ್, ಎಂ.ಎನ್ ಹಳ್ಳಿ ವಾಸುದೇವ್, ಕೆಂಬೋಡಿ ನಾರಾಯಣಸ್ವಾಮಿ, ಕೆ.ಜಿ ಮೋಹನ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್