ಬಿಟಿಎಸ್ ತಂಡ ಭೇಟಿಯಾಗಲು ಮನೆ ಬಿಟ್ಟ 13 ವರ್ಷದ ಬಾಲಕಿ; ಮೆಟ್ರೋ ನಿಲ್ದಾಣದಲ್ಲಿ ರಕ್ಷಣೆ
ಬಿಟಿಎಸ್ ತಂಡವನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ತೆರಳುವ ಉದ್ದೇಶದಿಂದ ಮನೆ ಬಿಟ್ಟಿದ್ದ ಬೆಂಗಳೂರಿನ 13 ವರ್ಷದ ಬಾಲಕಿಯನ್ನು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ರಕ್ಷಿಸಿ, ಕೌನ್ಸೆಲಿಂಗ್ ಬಳಿಕ ಪೋಷಕರಿಗೆ ಒಪ್ಪಿಸಿದ್ದಾರೆ.
13-year-old-bengaluru-girl-leaves-home-to-meet-bts-rescued-at-attiguppe-metro


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ದಕ್ಷಿಣ ಕೊರಿಯಾದ ಜನಪ್ರಿಯ ಕೆ-ಪಾಪ್ ಸಂಗೀತ ತಂಡ ಬಿಟಿಎಸ್ ಅನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ತೆರಳುವ ಉದ್ದೇಶದಿಂದ ಬೆಂಗಳೂರಿನ 13 ವರ್ಷದ ಬಾಲಕಿಯೊಬ್ಬಳು ಮನೆ ಬಿಟ್ಟು ಬಂದ ಘಟನೆ ನಡೆದಿದೆ. ಬಾಲಕಿಯನ್ನು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಪತ್ತೆಹಚ್ಚಿ, ಕೌನ್ಸೆಲಿಂಗ್ ನೀಡಿ ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ.

ಮೂಲತಃ ಮಹಾರಾಷ್ಟ್ರದವರಾದ ದಂಪತಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದು ಹೆಬ್ಬಗೋಡಿಯಲ್ಲಿ ನೆಲೆಸಿದ್ದಾರೆ. ಅವರ 13 ವರ್ಷದ ಪುತ್ರಿ ಕೊರಿಯನ್ ಹಾಡುಗಳು, ವೆಬ್ ಸರಣಿಗಳು ಹಾಗೂ ಸಿನಿಮಾಗಳನ್ನು ಮೊಬೈಲ್ನಲ್ಲಿ ಹೆಚ್ಚಿನ ಸಮಯ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ.

ಬಿಟಿಎಸ್ ತಂಡದ ಪ್ರಭಾವಕ್ಕೊಳಗಾಗಿದ್ದ ಬಾಲಕಿ, ತನ್ನ ವೇಷಭೂಷಣ, ಮಾತಿನ ಶೈಲಿ ಹಾಗೂ ಹಾವಭಾವಗಳಲ್ಲೂ ಕೊರಿಯನ್ ಸಂಸ್ಕೃತಿಯನ್ನು ಅನುಸರಿಸಲು ಆರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಬಾಲಕಿ, ಯಾರಿಗೂ ಮಾಹಿತಿ ನೀಡದೆ ನಗರಕ್ಕೆ ಬಂದಿದ್ದಳು. ಇಡೀ ದಿನ ನಗರದ ವಿವಿಧೆಡೆ ಸುತ್ತಾಡಿದ ಬಳಿಕ ಮಧ್ಯರಾತ್ರಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣ ತಲುಪಿದ್ದಳು. ಈ ವೇಳೆ ಟಿಕೆಟ್ ಇಲ್ಲದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಲಕಿಯನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ.

ತಕ್ಷಣವೇ ತುರ್ತು ಸಹಾಯವಾಣಿ 112ಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಚಂದ್ರಾ ಲೇಔಟ್ ಠಾಣೆಯ ಹೊಯ್ಸಳ ಸಿಬ್ಬಂದಿ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ವಿಚಾರಣೆ ವೇಳೆ ಬಿಟಿಎಸ್ ತಂಡವನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ತೆರಳುವ ಉದ್ದೇಶದಿಂದ ಮನೆ ಬಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ನಡುವೆ ಬಾಲಕಿ ಕಾಣೆಯಾಗಿರುವ ಕುರಿತು ಆಕೆಯ ಪೋಷಕರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಂದ್ರಾ ಲೇಔಟ್ ಪೊಲೀಸರು ಹೆಬ್ಬಗೋಡಿ ಪೊಲೀಸರನ್ನು ಸಂಪರ್ಕಿಸಿ, ಪೋಷಕರನ್ನು ಠಾಣೆಗೆ ಕರೆಸಿ ಬಾಲಕಿಯನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಗೆ ಸೂಕ್ತ ಕೌನ್ಸೆಲಿಂಗ್ ನೀಡಲಾಗಿದೆ ಎಂದು ತಿಳಿದುಬಂದಿದೆ.ಪೋಷಕರು ಮಕ್ಕಳ ಮೊಬೈಲ್ ಬಳಕೆ ಹಾಗೂ ಆನ್ಲೈನ್ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳು, ವೆಬ್ ಸರಣಿಗಳು ಹಾಗೂ ಇತರ ಆನ್ಲೈನ್ ವಿಷಯಗಳ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ಸಂವಹನ ನಡೆಸಬೇಕು ಎಂದು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದ ಬಿಟಿಎಸ್ ಅಥವಾ ‘ಬಂಗ್ಟನ್ ಬಾಯ್ಸ್’ ಜಾಗತಿಕವಾಗಿ ಜನಪ್ರಿಯವಾಗಿರುವ ಕೆ-ಪಾಪ್ ಸಂಗೀತ ತಂಡವಾಗಿದೆ. ಅವರ ಸಂಗೀತದಲ್ಲಿ ಯುವಜನರ ಸ್ವಯಂ ಪ್ರೀತಿ, ಸಾಮಾಜಿಕ ಒತ್ತಡ, ಮಾನಸಿಕ ಆರೋಗ್ಯ, ಕನಸುಗಳು ಹಾಗೂ ವೈಯಕ್ತಿಕ ಹೋರಾಟಗಳಂತಹ ವಿಷಯಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣಗಳಿಂದಾಗಿ ವಿಶ್ವದಾದ್ಯಂತ ಯುವಜನರಲ್ಲಿ ಬಿಟಿಎಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ.

“ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಬಾಲಕಿಯನ್ನು 112 ಸಹಾಯವಾಣಿಯ ಮಾಹಿತಿ ಆಧರಿಸಿ ರಕ್ಷಿಸಲಾಗಿದೆ.

ವಿಚಾರಣೆ ಬಳಿಕ ಆಕೆ ಬಿಟಿಎಸ್ ತಂಡವನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ತೆರಳುವ ಉದ್ದೇಶ ಹೊಂದಿದ್ದಳು ಎಂಬುದು ತಿಳಿದುಬಂದಿದೆ. ಬಾಲಕಿಗೆ ಕೌನ್ಸೆಲಿಂಗ್ ನೀಡಿ ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿದೆ ಎಂದು ಪೋಲಿಸ್ ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande