
ಪುಣೆ, 08 ಜನವರಿ (ಹಿ.ಸ.) :
ಆ್ಯಂಕರ್ : ದೇಶದ ಖ್ಯಾತ ಪರಿಸರ ವಿಜ್ಞಾನಿ, ಪರಿಸರ ಚಿಂತಕ ಹಾಗೂ ಪದ್ಮಶ್ರೀ–ಪದ್ಮಭೂಷಣ ಪ್ರಶಸ್ತಿ ವಿಜೇತ ಡಾ. ಮಾಧವ ಗಾಡ್ಗೀಳ್ (82) ಅವರು ತಡರಾತ್ರಿ ಪುಣೆಯಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪರಿಸರ ವಿಜ್ಞಾನ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಪರಿಸರ ಇತಿಹಾಸ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಗಾಡ್ಗೀಳ್ ಅವರು ಪ್ರಧಾನ ಮಂತ್ರಿಗಳ ಪರಿಸರ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ 2011ರಲ್ಲಿ ಸಲ್ಲಿಸಿದ ಗಾಡ್ಗಿಲ್ ವರದಿ ಅವರನ್ನು ದೇಶದಾದ್ಯಂತ ಚರ್ಚೆಯ ಕೇಂದ್ರಬಿಂದುವಾಗಿಸಿತು. ಪಶ್ಚಿಮ ಘಟ್ಟಗಳನ್ನು ಪರಿಸರ ಸಂವೇದನಾಶೀಲ ಪ್ರದೇಶವೆಂದು ಘೋಷಿಸಿ, ಗಣಿಗಾರಿಕೆ ಹಾಗೂ ಅನಿಯಂತ್ರಿತ ಅಭಿವೃದ್ಧಿಗೆ ಕಡಿವಾಣ ಹಾಕುವಂತೆ ಈ ವರದಿ ಶಿಫಾರಸು ಮಾಡಿತ್ತು. ಇದು ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿ ಪರಿಗಣಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಜನಿಸಿದರೂ ಕರ್ನಾಟಕದೊಂದಿಗೆ ಆಳವಾದ ನಂಟು ಹೊಂದಿದ್ದ ಗಾಡ್ಗೀಳ್ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೂ ಅಪಾರ ಪ್ರೀತಿ ಹೊಂದಿದ್ದರು. ಪಶ್ಚಿಮ ಘಟ್ಟಗಳು ಕರ್ನಾಟಕದ ಪ್ರಮುಖ ಜೀವ ವೈವಿಧ್ಯ ವಲಯವಾಗಿರುವುದರಿಂದ, ಅವರ ಅಧ್ಯಯನಗಳು ರಾಜ್ಯದ ಪರಿಸರ ಚಳವಳಿಗೆ ದೊಡ್ಡ ಶಕ್ತಿ ನೀಡಿದ್ದವು. ಕರ್ನಾಟಕದ ಪರಿಸರ ಕಾರ್ಯಕರ್ತರು ಅವರನ್ನು ತಮ್ಮವರಂತೆಯೇ ಗೌರವಿಸುತ್ತಿದ್ದರು.
ಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿ ಪ್ರಾಧ್ಯಾಪಕರಾಗಿದ್ದ ಗಾಡ್ಗೀಳ್ ಅವರು ಅನೇಕ ಮಹತ್ವದ ಕೃತಿಗಳು ಹಾಗೂ ಸಂಶೋಧನೆಗಳನ್ನು ನೀಡಿದ್ದಾರೆ. ಅವರ ಕೆಲಸಗಳು ದೇಶದಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿಯೂ ಗೌರವ ಪಡೆದಿವೆ.
ಪರಿಸರ ಸಂರಕ್ಷಣೆಗೆ ನೀಡಿದ ಅಪಾರ ಕೊಡುಗೆಗಾಗಿ ಡಾ. ಗಾಡ್ಗೀಳ್ ಅವರಿಗೆ 1981ರಲ್ಲಿ ಪದ್ಮಶ್ರೀ, 2006ರಲ್ಲಿ ಪದ್ಮಭೂಷಣ ಹಾಗೂ 1983ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa