
ನವದೆಹಲಿ, 07 ಜನವರಿ (ಹಿ.ಸ.) :
ಆ್ಯಂಕರ್ : ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಗುಜರಾತ್‌ನ ಪ್ರಸಿದ್ಧ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನದ ಬಗ್ಗೆ ವಿರೋಧಭಾವವಿತ್ತು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಗಂಭೀರ ಆರೋಪ ಮಾಡಿದೆ. ಈ ಆರೋಪಕ್ಕೆ ಬೆಂಬಲವಾಗಿ ಪಂಡಿತ್ ನೆಹರು ಬರೆದಿದ್ದ ಹಲವು ಪತ್ರಗಳನ್ನು ಬಿಜೆಪಿ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದೆ.
ಬಿಜೆಪಿ ವಕ್ತಾರ ಡಾ. ಸುಧಾಂಶು ತ್ರಿವೇದಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತಿಹಾಸದಲ್ಲಿ ಸೋಮನಾಥ ದೇವಾಲಯವನ್ನು ಮೊಹಮ್ಮದ್ ಘಜ್ನಿ ಮತ್ತು ಖಿಲ್ಜಿ ಲೂಟಿ ಮಾಡಿದ್ದರೂ, ಸ್ವತಂತ್ರ ಭಾರತದ ಕಾಲದಲ್ಲಿ ಪಂಡಿತ್ ನೆಹರು ಭಗವಾನ್ ಸೋಮನಾಥನ ವಿರುದ್ಧ ಹೆಚ್ಚು ವಿರೋಧ ತೋರಿಸಿದ್ದರು ಎಂದು ಆರೋಪಿಸಿದರು.
1951ರ ಏಪ್ರಿಲ್ 21ರಂದು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಅವರಿಗೆ ಪಂಡಿತ್ ನೆಹರು ಬರೆದ ಪತ್ರವನ್ನು ಉಲ್ಲೇಖಿಸಿದ ಅವರು, ಆ ಪತ್ರದಲ್ಲಿ ಲಿಯಾಕತ್ ಅಲಿ ಖಾನ್ ಅವರನ್ನು “ಪ್ರಿಯ ನವಾಬ್ಜಾದಾ” ಎಂದು ಸಂಬೋಧಿಸಿರುವುದು ಹಾಗೂ ಸೋಮನಾಥ ದೇವಾಲಯದ ದ್ವಾರಗಳ ಕುರಿತು ಇರುವ ಕಥೆಯನ್ನು “ಸಂಪೂರ್ಣ ಸುಳ್ಳು” ಎಂದು ವರ್ಣಿಸಿರುವುದನ್ನು ನೆನಪಿಸಿದರು. ಸೋಮನಾಥ ದೇವಾಲಯದ ಪುನರ್ ನಿರ್ಮಾಣದ ವಿಚಾರವನ್ನು ನೆಹರು ತಗ್ಗಿಸಲು ಪ್ರಯತ್ನಿಸಿದ್ದರು ಎಂಬುದೇ ಇದಕ್ಕೆ ಸಾಕ್ಷಿಯೆಂದು ಹೇಳಿದರು.
ಪಾಕಿಸ್ತಾನದ ಪ್ರಚಾರವನ್ನು ಎದುರಿಸುವ ಬದಲು ಮತ್ತು ಭಾರತದ ನಾಗರಿಕತೆಯ ಸ್ಮರಣೆಯನ್ನು ರಕ್ಷಿಸುವ ಬದಲು, ಪಂಡಿತ್ ನೆಹರು ಹಿಂದೂ ಐತಿಹಾಸಿಕ ಚಿಹ್ನೆಗಳನ್ನು ಕಡಿಮೆ ಮಾಡಿ ಬಾಹ್ಯ ಸಮಾಧಾನ ರಾಜಕೀಯಕ್ಕೆ ಆದ್ಯತೆ ನೀಡಿದರು. ಇದು ಕುರುಡು ಸಮಾಧಾನ ನೀತಿಯಲ್ಲದೇ ಮತ್ತೇನು ಎಂದು ಡಾ. ತ್ರಿವೇದಿ ಪ್ರಶ್ನಿಸಿದರು.
ಸೋಮನಾಥ ದೇವಾಲಯದ ಪುನರ್ ನಿರ್ಮಾಣಕ್ಕೆ ಪಂಡಿತ್ ನೆಹರು ವಿರೋಧಿಸಿದ್ದರು ಎಂದು ಹೇಳಿದ ಅವರು, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಂತೆ ಸಂಪುಟ ಸಚಿವರಿಗೆ ಮಾತ್ರವಲ್ಲದೆ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಹಾಗೂ ಉಪರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರಿಗೂ ಪತ್ರ ಬರೆದಿದ್ದರು ಎಂದು ಆರೋಪಿಸಿದರು.
ಇದೇ ವಿಚಾರವಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದು, ಸೋಮನಾಥ ದೇವಾಲಯದ ನಿರ್ಮಾಣದಿಂದ ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ನೆಹರು ದೂರಿದ್ದಾರೆ ಎಂಬುದನ್ನೂ ಅವರು ಉಲ್ಲೇಖಿಸಿದರು. ಪವಿತ್ರೀಕರಣ ಸಮಾರಂಭವನ್ನು “ಆಡಂಬರದ ವ್ಯವಹಾರ” ಎಂದು ಕರೆದ ಪಂಡಿತ್ ನೆಹರು, ಅದರ ಸುದ್ದಿಪ್ರಚಾರವನ್ನು ಕಡಿಮೆ ಮಾಡಲು ಮಾಹಿತಿ ಮತ್ತು ಪ್ರಸಾರ ಸಚಿವ ಆರ್.ಆರ್. ದಿವಾಕರ್ ಅವರಿಗೆ ಪತ್ರ ಬರೆದಿದ್ದರು ಎಂದು ಹೇಳಿದರು.
ಸೋಮನಾಥ ದೇವಾಲಯದ ಪವಿತ್ರೀಕರಣಕ್ಕೆ ಸಿಂಧೂ ನದಿಯ ನೀರನ್ನು ಬಳಸುವ ವಿನಂತಿಯನ್ನು ನೆಹರು ಔಪಚಾರಿಕವಾಗಿ ತಿರಸ್ಕರಿಸಿದ್ದರು. ಈ ಕುರಿತು ವಿದೇಶಾಂಗ ಕಾರ್ಯದರ್ಶಿಯ ಮೂಲಕ ಯಾವುದೇ ಅನುಮೋದನೆ ನೀಡುವುದಿಲ್ಲ ಎಂದು ತಿಳಿಸಿ, ಮುಂದಿನ ದಿನಗಳಲ್ಲಿ ಇಂತಹ ವಿನಂತಿಗಳಿಗೆ ಪೂರ್ವಾನುಮೋದನೆ ಕಡ್ಡಾಯ ಎಂದು ಆದೇಶಿಸಿದ್ದರು ಎಂದು ಬಿಜೆಪಿ ವಕ್ತಾರರು ಹೇಳಿದರು.
ಚೀನಾಕ್ಕೆ ಭಾರತದ ರಾಯಭಾರಿ ಕೆ.ಎಂ. ಪಣಿಕ್ಕರ್ ಅವರಿಗೆ ಬರೆದ ಪತ್ರದಲ್ಲಿ, ಸೋಮನಾಥ ದೇವಾಲಯದ ಉದ್ಘಾಟನೆಯಲ್ಲಿ ರಾಷ್ಟ್ರಪತಿಗಳ ಭಾಗವಹಿಸುವಿಕೆಯ ಪರಿಣಾಮವನ್ನು “ಕಡಿಮೆ ಮಾಡಲು ಪ್ರಯತ್ನಿಸಿದ್ದೇನೆ” ಎಂದು ಪಂಡಿತ್ ನೆಹರು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಡಾ. ಸುಧಾಂಶು ತ್ರಿವೇದಿ ಆರೋಪಿಸಿದರು. ಇದು ದೇವಾಲಯದ ಸಾಂಕೇತಿಕ ಮಹತ್ವವನ್ನು ಉದ್ದೇಶಪೂರ್ವಕವಾಗಿ ತಗ್ಗಿಸಲು ಮಾಡಿದ ಪ್ರಯತ್ನವೆಂದು ಅವರು ಹೇಳಿದರು.
ಸೋಮನಾಥ ದೇವಾಲಯದ ಉದ್ಘಾಟನೆಯಲ್ಲಿ ರಾಷ್ಟ್ರಪತಿಗಳು ಭಾಗವಹಿಸುವುದಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿ, ಆಗಿನ ಗೃಹ ಸಚಿವ ಸಿ. ರಾಜಗೋಪಾಲಾಚಾರಿ ಅವರಿಗೆ ಎರಡು ಪತ್ರಗಳನ್ನು ಬರೆದಿದ್ದೂ ದಾಖಲೆಗಳಲ್ಲಿ ಇದೆ ಎಂದು ಅವರು ಹೇಳಿದರು. ರಾಷ್ಟ್ರದ ಮುಖ್ಯಸ್ಥರನ್ನು ಪ್ರಮುಖ ಹಿಂದೂ ಧಾರ್ಮಿಕ ಕಾರ್ಯಕ್ರಮದಿಂದ ದೂರವಿಡಲು ಪಂಡಿತ್ ನೆಹರು ಸಕ್ರಿಯವಾಗಿ ಪ್ರಯತ್ನಿಸಿದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ವಕ್ತಾರರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa