
ವಾಷಿಂಗ್ಟನ್, 04 ಜನವರಿ (ಹಿ.ಸ.) :
ಆ್ಯಂಕರ್ : ಅಮೆರಿಕದ ಮಿಲಿಟರಿ ದಾಳಿಯಿಂದ ವೆನೆಜುವೆಲಾ ತೀವ್ರ ಅಶಾಂತಿಗೆ ಒಳಗಾಗಿದೆ. ಶನಿವಾರ ಬೆಳಿಗ್ಗೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಅಮೆರಿಕ ಸೇನೆಯ ವೈಮಾನಿಕ ದಾಳಿಯಿಂದ ಭಾರಿ ಸ್ಫೋಟಗಳು ಸಂಭವಿಸಿದ್ದು, ಬಳಿಕ ಅಮೆರಿಕದ ಭದ್ರತಾ ಪಡೆಗಳು ಅಧ್ಯಕ್ಷೀಯ ಅರಮನೆಯನ್ನು ಪ್ರವೇಶಿಸಿವೆ. ಈ ಕಾರ್ಯಾಚರಣೆಯ ವೇಳೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ಅಮೆರಿಕಕ್ಕೆ ಕರೆದೊಯ್ಯಲಾಗಿದೆ.
ಸಿಎನ್‌ಎನ್ ವರದಿ ಪ್ರಕಾರ, ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಮಡುರೊ ದಂಪತಿಯನ್ನು ಪ್ರಸ್ತುತ ನ್ಯೂಯಾರ್ಕ್‌ನ ಸ್ಟೀವರ್ಟ್ ಏರ್ ನ್ಯಾಷನಲ್ ಗಾರ್ಡ್ ಮಿಲಿಟರಿ ನೆಲೆಯಲ್ಲಿ ಇರಿಸಲಾಗಿದೆ. ಕಾನೂನು ಜಾರಿ ಅಧಿಕಾರಿಗಳ ಮಾಹಿತಿ ಪ್ರಕಾರ, ಫ್ಲೋರ್ಸ್ ಅವರಿಗೆ ಅಲ್ಲಿನ ಹ್ಯಾಂಗರ್‌ನಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.
ಕ್ಯಾರಕಾಸ್‌ನಲ್ಲಿ ನಡೆದ ಪ್ರಮುಖ ಮಿಲಿಟರಿ ಕಾರ್ಯಾಚರಣೆಯ ವೇಳೆ ದಂಪತಿಯನ್ನು ಅವರ ಮಲಗುವ ಕೋಣೆಯಿಂದ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಮಡುರೊ ಅವರನ್ನು ಮುಂದಿನ ಹಂತದಲ್ಲಿ ಮೆಟ್ರೋಪಾಲಿಟನ್ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದ್ದು, ಮುಂದಿನ ವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಮಾದಕವಸ್ತು ಸಾಗಣೆ ಹಾಗೂ ಶಸ್ತ್ರಾಸ್ತ್ರ ಸಂಬಂಧಿತ ಆರೋಪಗಳನ್ನು ಎದುರಿಸುವ ನಿರೀಕ್ಷೆಯಿದೆ.
ಇದಕ್ಕೆ ಮಧ್ಯೆ, ವೆನೆಜುವೆಲಾದ ವಿರೋಧ ಪಕ್ಷವು ಅರ್ಜೆಂಟೀನಾ, ಈಕ್ವೆಡಾರ್, ಪನಾಮ, ಪರಾಗ್ವೆ ಸೇರಿದಂತೆ ಹಲವಾರು ಪ್ರಾದೇಶಿಕ ರಾಷ್ಟ್ರಗಳು ಮತ್ತು ಫ್ರಾನ್ಸ್‌ನೊಂದಿಗೆ ಸಂಪರ್ಕದಲ್ಲಿದ್ದು, ವೆನೆಜುವೆಲಾದ ಜನರ ಇಚ್ಛೆಯನ್ನು ಪುನಃಸ್ಥಾಪಿಸಲು ಅಂತಾರಾಷ್ಟ್ರೀಯ ಬೆಂಬಲ ದೊರಕಿದೆ ಎಂದು ಹೇಳಿದೆ.
ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ಅವರಿಗೆ ದೇಶವನ್ನು ಆಳಲು ಅಗತ್ಯವಿರುವ ಸಂಪೂರ್ಣ ಬೆಂಬಲವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜುಲೈ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಎಡ್ಮಂಡೊ ಗೊನ್ಜಾಲೆಜ್ ಶೇಕಡಾ 67 ಮತಗಳನ್ನು ಪಡೆದಿದ್ದು, ಮಡುರೊ ಕೇವಲ ಶೇಕಡಾ 30 ಮತ ಗಳಿಸಿದ್ದರು ಎಂದು ವಿರೋಧ ಪಕ್ಷ ಆರೋಪಿಸಿದೆ. ಆದರೆ ರಾಷ್ಟ್ರೀಯ ಚುನಾವಣಾ ಮಂಡಳಿ ಮತ ಎಣಿಕೆಯ ವಿವರ ಪ್ರಕಟಿಸದೇ ಮಡುರೊ ಅವರನ್ನು ವಿಜೇತರೆಂದು ಘೋಷಿಸಿತ್ತು. ಈ ತೀರ್ಪನ್ನು ಬಹುತೇಕ ಅಂತಾರಾಷ್ಟ್ರೀಯ ಸಮುದಾಯ ತಿರಸ್ಕರಿಸಿತ್ತು.
ಇನ್ನೊಂದೆಡೆ, ಮಡುರೊ ಬಂಧನದ ಕೆಲವೇ ಗಂಟೆಗಳ ಬಳಿಕ ವೆನೆಜುವೆಲಾದ ಸರ್ಕಾರದ ಉನ್ನತ ನಾಯಕರು ಅಮೆರಿಕದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ದೇಶದ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ಮಡುರೊ ಬಂಧನವನ್ನು “ಅನಾಗರಿಕ ಹಾಗೂ ಕಾನೂನುಬಾಹಿರ ಅಪಹರಣೆ” ಎಂದು ಕರೆದಿದ್ದು, ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa