
ನವದೆಹಲಿ, 04 ಜನವರಿ (ಹಿ.ಸ.) :
ಆ್ಯಂಕರ್ : ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾನುವಾರ ಸ್ನೇಹಪರ ರಾಷ್ಟ್ರಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಶ್ರೀಲಂಕಾಕ್ಕೆ ಅಧಿಕೃತ ಭೇಟಿಗೆ ತೆರಳಿದ್ದಾರೆ. ಈ ಭೇಟಿಯು ದ್ವಿಪಕ್ಷೀಯ ರಕ್ಷಣಾ ಸಹಕಾರ, ವೃತ್ತಿಪರ ಮಿಲಿಟರಿ ವಿನಿಮಯ ಹಾಗೂ ಸೇನೆ–ಸೇನೆ ನಡುವಿನ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಜನರಲ್ ದ್ವಿವೇದಿ ಅವರ ಯುಎಇ ಭೇಟಿ ಜನವರಿ 6ರವರೆಗೆ ನಡೆಯಲಿದೆ. ಆಗಮನದ ಬಳಿಕ ಅವರು ಯುಎಇ ಭೂ ಪಡೆಗಳಿಂದ ಗೌರವ ರಕ್ಷೆಯನ್ನು ಸ್ವೀಕರಿಸಲಿದ್ದು, ಯುಎಇ ಭೂ ಪಡೆಗಳ ಕಮಾಂಡರ್ ಸೇರಿದಂತೆ ಸಶಸ್ತ್ರ ಪಡೆಗಳ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಯುಎಇ ಸಶಸ್ತ್ರ ಪಡೆಗಳ ಸಂಘಟನೆ, ಪಾತ್ರ ಹಾಗೂ ಸಾಮರ್ಥ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದು, ಪ್ರಮುಖ ಮಿಲಿಟರಿ ಸ್ಥಾಪನೆಗಳಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಜೊತೆಗೆ ಯುಎಇ ರಾಷ್ಟ್ರೀಯ ರಕ್ಷಣಾ ಕಾಲೇಜಿಗೆ ಭೇಟಿ ನೀಡಿ ಮಿಲಿಟರಿ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡುವರು.
ಯುಎಇ ಭೇಟಿ ನಂತರ ಜನರಲ್ ದ್ವಿವೇದಿ ಅವರು ಜನವರಿ 7–8 ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಲಂಕಾ ಸೇನೆಯಿಂದ ಗೌರವ ರಕ್ಷೆ ನೀಡಲಾಗುತ್ತದೆ. ಅವರು ಶ್ರೀಲಂಕಾ ಸೇನೆಯ ಕಮಾಂಡರ್, ರಕ್ಷಣಾ ಉಪ ಸಚಿವರು ಹಾಗೂ ರಕ್ಷಣಾ ಕಾರ್ಯದರ್ಶಿ ಸೇರಿದಂತೆ ಹಿರಿಯ ಮಿಲಿಟರಿ ಮತ್ತು ನಾಗರಿಕ ನಾಯಕತ್ವವನ್ನು ಭೇಟಿಯಾಗಲಿದ್ದಾರೆ.
ಬುಟ್ಟಾಲಾದ ರಕ್ಷಣಾ ಸೇವೆಗಳ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಲ್ಲಿ ಹಾಗೂ ಸೇನಾ ಯುದ್ಧ ಕಾಲೇಜಿನಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ರಕ್ಷಣಾ ಶಿಕ್ಷಣ ಮತ್ತು ವೃತ್ತಿಪರ ಮಿಲಿಟರಿ ವಿನಿಮಯದಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ. ಈ ವೇಳೆ ಐಪಿಕೆಎಫ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಭಾರತೀಯ ಸೈನಿಕರ ಅತ್ಯುನ್ನತ ತ್ಯಾಗಕ್ಕೆ ಗೌರವ ಸಲ್ಲಿಸಲಿದ್ದಾರೆ.
ಈ ಪ್ರವಾಸವು ಹಿಂದೂ ಮಹಾಸಾಗರ ಪ್ರದೇಶ ಹಾಗೂ ಪಶ್ಚಿಮ ಏಷ್ಯಾದ ಸ್ನೇಹಪರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುವ ಮತ್ತು ಪರಸ್ಪರ ನಂಬಿಕೆಯನ್ನು ಉತ್ತೇಜಿಸುವ ಭಾರತದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa