
ಪ್ರಯಾಗರಾಜ್, 03 ಜನವರಿ (ಹಿ.ಸ.) :
ಆ್ಯಂಕರ್ : ಹರ ಹರ ಗಂಗಾ” ಮಂತ್ರೋಚ್ಚಾರಣೆಯ ನಡುವೆ ಪೌಷ ಪೂರ್ಣಿಮೆ ಸ್ನಾನವು ಉತ್ತರಪ್ರದೇಶದ ಪ್ರಯಾಗರಾಜನಲ್ಲಿ ಶನಿವಾರ ಮುಂಜಾನೆ ಶುಭ ಮುಹೂರ್ತದಲ್ಲಿ ಆರಂಭವಾಗಿದ್ದು, ಇದರೊಂದಿಗೆ ಒಂದು ತಿಂಗಳ ಕಾಲ ನಡೆಯುವ ಕಲ್ಪವಾಸಕ್ಕೂ ಅಧಿಕೃತ ಚಾಲನೆ ದೊರಕಿದೆ. ವಿಶ್ವಪ್ರಸಿದ್ಧ ಪ್ರಯಾಗರಾಜ್ ಮಾಘ ಮೇಳದ ಪ್ರಮುಖ ಆಚರಣೆಯಾದ ಈ ಶುಭ ಸ್ನಾನಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.
ಪವಿತ್ರ ಗಂಗಾ, ಯಮುನಾ ಹಾಗೂ ಭೂಗತ ಸರಸ್ವತಿಯ ಸಂಗಮದಲ್ಲಿ ಭಕ್ತರು ಪಾವನ ಸ್ನಾನ ಮಾಡಿ ಪುಣ್ಯ ಸಂಪಾದಿಸಿದರು. ಮುಂಜಾನೆ ಬೆಳಗಾಗುತ್ತಿದ್ದಂತೆಯೇ ಸಂಗಮದ ದಡಗಳು ಭಕ್ತರ ಹರ್ಷೋದ್ಗಾರಗಳಿಂದ ಪ್ರತಿಧ್ವನಿಸಿತು. ಕಠಿಣ ಚಳಿಗಾಲದ ಹವಾಮಾನವೂ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ. ಕಲ್ಪವಾಸಿಗಳು ತಮ್ಮ ಶಿಬಿರಗಳಲ್ಲಿ ವಾಸ್ತವ್ಯ ಹೂಡಿ ಆಧ್ಯಾತ್ಮಿಕ ಆಚರಣೆಗಳಿಗೆ ತೊಡಗಿದರು.
ಮಾಘ ಮೇಳದ ಉಸ್ತುವಾರಿ ಋಷಿರಾಜ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಪಾಂಡೆ ಮಾತನಾಡಿ, ಪವಿತ್ರ ತೀರದಲ್ಲಿ ಶುಭ ಸಮಯದಲ್ಲಿ ಭಕ್ತರು ಹರ ಹರ ಗಂಗಾ ಜಪದೊಂದಿಗೆ ನಂಬಿಕೆಯ ಸ್ನಾನ ಮಾಡುವ ಮೂಲಕ ಪುಣ್ಯಾರ್ಜನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಎಲ್ಲ ಘಾಟ್‌ಗಳಲ್ಲಿ ಭಕ್ತರ ಭಾರೀ ಸಂಚಾರ ಕಂಡುಬಂದಿದ್ದು, ನಿರಂತರವಾಗಿ ಸ್ನಾನ ನಡೆಯುತ್ತಿದೆ ಎಂದರು.
ಭಕ್ತರ ಸುರಕ್ಷತೆಗಾಗಿ ವ್ಯಾಪಕ ಮತ್ತು ಬಹು ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಜಾತ್ರಾ ಪ್ರದೇಶದಲ್ಲಿ ನಾಗರಿಕ ಪೊಲೀಸ್, ಕೇಂದ್ರ ಪಡೆಗಳು, ಜಲ ಭದ್ರತಾ ದಳ, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡಗಳು ಹಾಗೂ ತಾಂತ್ರಿಕ ಘಟಕಗಳನ್ನು ನಿಯೋಜಿಸಲಾಗಿದೆ.
ಮಾಘ ಮೇಳದ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿ 7 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು 14 ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಿಕ ಪೊಲೀಸ್ ಪಡೆಗಳಡಿ 29 ಇನ್ಸ್‌ಪೆಕ್ಟರ್‌ಗಳು, 221 ಪುರುಷ ಸಬ್-ಇನ್‌ಸ್ಪೆಕ್ಟರ್‌ಗಳು, 15 ಮಹಿಳಾ ಸಬ್-ಇನ್‌ಸ್ಪೆಕ್ಟರ್‌ಗಳು, 1593 ಪುರುಷ ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು ಕಾನ್ಸ್‌ಟೇಬಲ್‌ಗಳು ಹಾಗೂ 136 ಮಹಿಳಾ ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa