
ನವದೆಹಲಿ, 03 ಜನವರಿ (ಹಿ.ಸ.) :
ಆ್ಯಂಕರ್ : ಗಿಗ್ ಕೆಲಸಗಾರರಿಗೆ ಗೌರವಾನ್ವಿತ ಕೆಲಸದ ಪರಿಸ್ಥಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತದ ತೆಲಂಗಾಣ ಹಾಗೂ ಕರ್ನಾಟಕ ಸರ್ಕಾರಗಳು ಮಹತ್ವದ ಕ್ರಮಗಳನ್ನು ಕೈಗೊಂಡಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಪ್ರತಿ ವಹಿವಾಟಿನ ಮೇಲೆ 1 ರಿಂದ 5 ಪ್ರತಿಶತದಷ್ಟು ಕಲ್ಯಾಣ ಶುಲ್ಕ ವಿಧಿಸುವ ಮೂಲಕ ಗಿಗ್ ಕಾರ್ಮಿಕರಿಗಾಗಿ ವಿಶೇಷ ಕಲ್ಯಾಣ ನಿಧಿಗಳನ್ನು ಸ್ಥಾಪಿಸಲಾಗಿದೆ. ಕಾರ್ಮಿಕರ ನೋಂದಣಿ, ಶುಲ್ಕ ಸಂಗ್ರಹಣೆ, ಪಾರದರ್ಶಕತೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತ್ರಿಪಕ್ಷೀಯ ಕಲ್ಯಾಣ ಮಂಡಳಿಯನ್ನೂ ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಾನ್ಯ ಕಾರಣವಿಲ್ಲದೆ ಮತ್ತು ಕನಿಷ್ಠ 14 ದಿನಗಳ ಪೂರ್ವ ಸೂಚನೆ ಇಲ್ಲದೆ ಯಾವುದೇ ಗಿಗ್ ಕೆಲಸಗಾರನನ್ನು ವಜಾಗೊಳಿಸಬಾರದು ಎಂಬ ನಿಯಮ ಜಾರಿಗೆ ತರಲಾಗಿದೆ. ಜೊತೆಗೆ, ಸುರಕ್ಷಿತ ಕೆಲಸದ ವಾತಾವರಣ, ನ್ಯಾಯಯುತ ಒಪ್ಪಂದಗಳು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಅಗತ್ಯವಾದ ನಿಬಂಧನೆಗಳನ್ನು ಈ ರಾಜ್ಯಗಳು ಅನುಷ್ಠಾನಗೊಳಿಸಿವೆ ಎಂದು ಜೈರಾಮ್ ರಮೇಶ್ ವಿವರಿಸಿದ್ದಾರೆ
ಇನ್ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ, ಮೋದಿ ಸರ್ಕಾರ ಗಿಗ್ ಕಾರ್ಮಿಕರ ಪ್ರತಿಭಟನೆಗಳ ಕುರಿತು ತಡವಾಗಿ ಎಚ್ಚರಗೊಂಡಿದ್ದು, ಅದರ ನಿಲುವು ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೈಗೊಂಡಿರುವ ಉಪಕ್ರಮಗಳಿಗಿಂತ ಬಹಳ ಹಿಂದುಳಿದಿದೆ ಎಂದು ಟೀಕಿಸಿದ್ದಾರೆ.
ಗಿಗ್ ಕಾರ್ಮಿಕರ ರಕ್ಷಣೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ ಐದು ಅಂಶಗಳ “ಯುವ ನ್ಯಾಯ” ಕಾರ್ಯಸೂಚಿಯ ಪ್ರಮುಖ ಆಧಾರಸ್ತಂಭವಾಗಿದ್ದು, ಈ ವರ್ಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಗೌರವಯುತ ಬದುಕು ಒದಗಿಸುವುದೇ ಪಕ್ಷದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa