ಚುನಾವಣಾ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ
ನವದೆಹಲಿ, 21 ಜನವರಿ (ಹಿ.ಸ.) : ಆ್ಯಂಕರ್ : ಭಾರತದ ಚುನಾವಣಾ ಆಯೋಗದ ಆಶ್ರಯದಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ ಇಂದು ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಭಾರತೀಯ ಅಂತಾರಾಷ್ಟ್ರೀಯ ಸಮ್ಮೇಳನ (IICDEM–2026) ಭವ್ಯವಾಗಿ ಆರಂಭವಾಯಿತು. ಸುಮಾರು 70 ದೇಶಗಳಿಂದ ಆಗಮಿಸಿರುವ 100ಕ್ಕೂ ಹೆ
IICDEM


ನವದೆಹಲಿ, 21 ಜನವರಿ (ಹಿ.ಸ.) :

ಆ್ಯಂಕರ್ : ಭಾರತದ ಚುನಾವಣಾ ಆಯೋಗದ ಆಶ್ರಯದಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ ಇಂದು ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಭಾರತೀಯ ಅಂತಾರಾಷ್ಟ್ರೀಯ ಸಮ್ಮೇಳನ (IICDEM–2026) ಭವ್ಯವಾಗಿ ಆರಂಭವಾಯಿತು.

ಸುಮಾರು 70 ದೇಶಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, ಇದನ್ನು ಪ್ರಜಾಪ್ರಭುತ್ವ ಹಾಗೂ ಚುನಾವಣಾ ನಿರ್ವಹಣೆಯ ಕ್ಷೇತ್ರದಲ್ಲಿ ಭಾರತದ ಅತಿದೊಡ್ಡ ಅಂತಾರಾಷ್ಟ್ರೀಯ ವೇದಿಕೆಯೆಂದು ಪರಿಗಣಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಭಾಗಿಯಾಗಿದ್ದಾರೆ. ಪ್ರಜಾಪ್ರಭುತ್ವದ ಪ್ರಕ್ರಿಯೆಗಳು, ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳ ಅನುಷ್ಠಾನ, ತಂತ್ರಜ್ಞಾನ ಆಧಾರಿತ ಆಧುನಿಕ ಚುನಾವಣಾ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ಅನುಭವ ಮತ್ತು ಜ್ಞಾನ ವಿನಿಮಯವೇ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.

ಸಮ್ಮೇಳನದ ಮೊದಲ ದಿನ ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಅಧಿಕೃತ ಸ್ವಾಗತ ನೀಡಲಾಗಿದ್ದು, ಉದ್ಘಾಟನಾ ಅಧಿವೇಶನ ನಡೆಯಿತು. ಮುಂದಿನ ದಿನಗಳಲ್ಲಿ ಹಲವು ಸಮಗ್ರ ಹಾಗೂ ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ 2024ರ ಲೋಕ ಸಭಾ ಚುನಾವಣೆಯ ಯೋಜನೆ ಹಾಗೂ ನಿರ್ವಹಣೆಯ ಸಂಪೂರ್ಣ ಚಿತ್ರಣ ನೀಡುವ “ಭಾರತ ನಿರ್ಧರಿಸುತ್ತದೆ” ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಇದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯ ಒಳನೋಟವನ್ನು ನೀಡಲಿದೆ.

ಅಂತಾರಾಷ್ಟ್ರೀಯ ಪ್ರತಿನಿಧಿಗಳೊಂದಿಗೆ ದೇಶದ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳು ಸಹ IICDEM–2026ರಲ್ಲಿ ಭಾಗವಹಿಸಿದ್ದಾರೆ. ಜೊತೆಗೆ IIT, IIM, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಹಾಗೂ ಭಾರತೀಯ ಸಮೂಹ ಸಂವಹನ ಸಂಸ್ಥೆ ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳ ತಜ್ಞರೂ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಸಮ್ಮೇಳನದ ಅವಧಿಯಲ್ಲಿ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳು, ಚುನಾವಣಾ ಪಾರದರ್ಶಕತೆ, ಮತದಾರರ ಪಾಲ್ಗೊಳ್ಳಿಕೆ ಹಾಗೂ ಉತ್ತಮ ಆಡಳಿತ ಕುರಿತಂತೆ ವ್ಯಾಪಕ ಮತ್ತು ಗಂಭೀರ ಚರ್ಚೆಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande