
ನವದೆಹಲಿ, 20 ಜನವರಿ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸುವ ಮೂಲಕ ಮಾನವನ ಸೀಮಿತ ಜೀವಿತಾವಧಿ, ಜ್ಞಾನದ ಅಗಾಧತೆ ಹಾಗೂ ಅನೇಕ ಅಡೆತಡೆಗಳ ನಡುವೆಯೂ ಜೀವನದ ಸಾರವನ್ನು ಗ್ರಹಿಸುವ ಮಹತ್ವದ ಸಂದೇಶವನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿರುವ ಈ ಶ್ಲೋಕದಲ್ಲಿ, “ಶಾಸ್ತ್ರಗಳು ಅನಂತವಾಗಿವೆ, ವಿಜ್ಞಾನಗಳು ಬಹಳಿವೆ. ಆದರೆ ಸಮಯ ಅಲ್ಪವಾಗಿದೆ ಮತ್ತು ಅಡೆತಡೆಗಳು ಅನೇಕವಾಗಿವೆ. ಆದ್ದರಿಂದ ಹಾಲಿನಲ್ಲಿನ ನೀರನ್ನು ಬೇರ್ಪಡಿಸುವ ಹಂಸದಂತೆ, ಅತ್ಯಾವಶ್ಯಕವಾದದ್ದನ್ನು ಮಾತ್ರ ಸ್ವೀಕರಿಸಬೇಕು” ಎಂಬ ಅರ್ಥವಿದೆ ಎಂದು ಅವರು ವಿವರಿಸಿದ್ದಾರೆ.
ಶ್ಲೋಕದ ಅರ್ಥವನ್ನು ವಿವರಿಸಿದ ಪ್ರಧಾನಿ, ಜೀವನದಲ್ಲಿ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ, ಅತ್ಯಂತ ಮುಖ್ಯ ಮತ್ತು ಉಪಯುಕ್ತ ಜ್ಞಾನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದ್ದಾರೆ.
ಹಂಸವು ಹಾಲಿನಿಂದ ಕೇವಲ ಹಾಲನ್ನು ತೆಗೆದುಕೊಂಡು ನೀರನ್ನು ಬಿಡುವಂತೆ, ಮಾನವನೂ ಅನಗತ್ಯವನ್ನು ತ್ಯಜಿಸಿ ಅಗತ್ಯವನ್ನೇ ಸ್ವೀಕರಿಸಬೇಕೆಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಈ ಸಂದೇಶವು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾತ್ರವಲ್ಲದೆ, ಸಮಾಜದ ಪ್ರತಿಯೊಂದು ವರ್ಗಕ್ಕೂ ಸ್ಪೂರ್ತಿದಾಯಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆಧುನಿಕ ಜೀವನದ ಗಡಿಬಿಡಿ, ಮಾಹಿತಿಯ ಮಿತಿಮೀರಿದ ಹರಿವು ಮತ್ತು ನಿರ್ಧಾರಗಳ ಒತ್ತಡದ ನಡುವೆ ಸರಿಯಾದ ಆಯ್ಕೆಗಳನ್ನು ಮಾಡುವ ಅಗತ್ಯವನ್ನು ಈ ಶ್ಲೋಕ ಸ್ಮರಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa