ಶಬರಿಮಲೆ ಚಿನ್ನ ಕಳವು ಪ್ರಕರಣ ; ಬೆಂಗಳೂರು–ಬಳ್ಳಾರಿಯಲ್ಲಿ ಇಡಿ ದಾಳಿ
ಬೆಂಗಳೂರು, 20 ಜನವರಿ (ಹಿ.ಸ.) : ಆ್ಯಂಕರ್ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಶಂಕೆಯ ಹಿನ್ನೆಲೆಯಲ್ಲಿ ಇಡಿ ಈ ಕಾರ್ಯ
Ed


ಬೆಂಗಳೂರು, 20 ಜನವರಿ (ಹಿ.ಸ.) :

ಆ್ಯಂಕರ್ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

ಅಕ್ರಮ ಹಣ ವರ್ಗಾವಣೆ ಶಂಕೆಯ ಹಿನ್ನೆಲೆಯಲ್ಲಿ ಇಡಿ ಈ ಕಾರ್ಯಾಚರಣೆ ಕೈಗೊಂಡಿದ್ದು, ಹಲವು ಪ್ರಮುಖ ಸ್ಥಳಗಳಲ್ಲಿ ಶೋಧ ಮತ್ತು ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದ ಟ್ರಸ್ಟಿ, ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಉನ್ನಿಕೃಷ್ಣನ್ ಪೊಟ್ಟಿಗೆ ಸೇರಿದ ನಿವಾಸ ಹಾಗೂ ಕೆಲವು ಟ್ರಸ್ಟಿಗಳ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದೇ ವೇಳೆ ಬಳ್ಳಾರಿಯಲ್ಲಿ ಪ್ರತಿಷ್ಠಿತ ರೊದ್ದಂ ಜ್ಯುವೆಲ್ಲರಿ ಅಂಗಡಿ ಮತ್ತು ಅದರ ಮಾಲೀಕ ಗೋವರ್ಧನ್ ಅವರ ನಿವಾಸದಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಒಟ್ಟು ಒಂಬತ್ತು ಮಂದಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಚಿನ್ನ ಕಳವು ಪ್ರಕರಣದಲ್ಲಿ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಅವರ ಪಾತ್ರ ಪ್ರಮುಖವಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ಶಬರಿಮಲೆ ದೇಗುಲದಿಂದ ಕಳವು ಮಾಡಿದ್ದ ಚಿನ್ನವನ್ನು ಗೋವರ್ಧನ್ ಅವರಿಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಅಕ್ರಮವಾಗಿ 470 ಗ್ರಾಂ ಚಿನ್ನವನ್ನು ಖರೀದಿಸಿದ ಆರೋಪದಡಿ ಕೇರಳದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ಗೋವರ್ಧನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಹಣ ಅಕ್ರಮವಾಗಿ ವರ್ಗಾವಣೆಗೊಂಡಿರುವ ಸಾಧ್ಯತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ಆರಂಭಿಸಿದೆ.

2019ರಲ್ಲಿ ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಕೇರಳ ಹೈಕೋರ್ಟ್ ಸಮಗ್ರ ತನಿಖೆಗೆ ಆದೇಶಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆಯ ಮಾಜಿ ಮುಖ್ಯ ಅರ್ಚಕ (ತಂತ್ರಿ) ಕಂದರಾರು ರಾಜೀವ್, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ ಈಗಾಗಲೇ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯಿಂದ ಚಿನ್ನ ಖರೀದಿಸಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಬಳ್ಳಾರಿಯೊಂದಿಗೆ ಈ ಪ್ರಕರಣದ ಸಂಪರ್ಕ ಬಹಿರಂಗವಾಗಿದ್ದು, ಅದೇ ಹಿನ್ನೆಲೆ ಇಡಿ ಈಗ ರಾಜ್ಯದಲ್ಲಿಯೂ ತನಿಖೆ ತೀವ್ರಗೊಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande