
ಬೆಂಗಳೂರು, 20 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ
ಡಿಜಿಪಿ ರಾಮಚಂದ್ರ ರಾವ್ ವಿರುದ್ಧದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ. ಜಿ. ಪರಮೇಶ್ವರ್, “ಇಂತಹ ಘಟನೆಗಳು ಯಾರಿಗೂ ಗೌರವ ತರುವುದಿಲ್ಲ. ಎಷ್ಟೇ ದೊಡ್ಡವರಿರಲಿ, ಹಿರಿಯರಾಗಿರಲಿ, ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಿನ್ನೆ ನನಗೆ ಆರೋಗ್ಯ ಸರಿಯಾಗಿರಲಿಲ್ಲ. ಮಧ್ಯಾಹ್ನ ಊಟದ ವೇಳೆ ಈ ವಿಷಯ ತಿಳಿಯಿತು. ತಕ್ಷಣವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದೆ. ಪೊಲೀಸ್ ಇಲಾಖೆ ಮಾತ್ರವಲ್ಲ, ಯಾವುದೇ ಇಲಾಖೆಯಲ್ಲೂ ಇಂತಹ ಘಟನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.
ಮುಖ್ಯಮಂತ್ರಿಗಳು ಕೂಡ ಈ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಗೃಹಸಚಿವರು, “ವಿಷಯ ತಿಳಿದ ತಕ್ಷಣವೇ ಸಿಎಂ ಅಮಾನತು ಮಾಡಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ನಾನು ಕೂಡ ಎಷ್ಟೇ ದೊಡ್ಡ ಅಧಿಕಾರಿ ಆಗಿದ್ದರೂ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟೆ. ಇಂತಹ ಕಠಿಣ ಸನ್ನಿವೇಶಗಳಲ್ಲಿ ಸರ್ಕಾರ ಕಠಿಣವಾಗಿಯೇ ಇರಬೇಕಾಗುತ್ತದೆ. ಹೀಗಾಗಿ ನಿನ್ನೆ ನಾನು ಅವರನ್ನು ಭೇಟಿ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
ರಾಮಚಂದ್ರ ರಾವ್ ತಮ್ಮ ಮೇಲಿನ ಆರೋಪಗಳನ್ನು ಸುಳ್ಳು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅದು ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ. ಈ ಘಟನೆಗಳು ಯಾರಿಗೂ ಗೌರವ ತರೋದಿಲ್ಲ. ಹೀಗಾಗಿ ತಕ್ಷಣಕ್ಕೆ ಅಮಾನತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತನಿಖೆಯ ವಿವಿಧ ಆಯಾಮಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
ರಾಮಚಂದ್ರ ರಾವ್ ಬಂಧಿಸಬೇಕೆಂಬ ಬಿಜೆಪಿಯ ಆಗ್ರಹದ ಕುರಿತು ಮಾತನಾಡಿದ ಗೃಹಸಚಿವರು, “ತಕ್ಷಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಯ ನಂತರ ಏನು ಬೇಕಾದರೂ ಆಗಬಹುದು. ಅವರು ಸೇವೆಯಿಂದ ವಜಾ ಕೂಡ ಆಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿ ಎಂಬುದನ್ನು ನೋಡದೇ ಯಾವುದೇ ಮುಲಾಜಿ ಇಲ್ಲದೆ ಕ್ರಮ ಕೈಗೊಳ್ಳಲಾಗಿದೆ. ತನಿಖೆಯಲ್ಲಿ ಏನು ಹೊರಬರುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ಕ್ರಮ ನಿರ್ಧರಿಸಲಾಗುತ್ತದೆ” ಎಂದು ಹೇಳಿದರು.
ಇದೇ ವೇಳೆ ರಾಸಲೀಲೆ ಪ್ರಕರಣದ ಬೆನ್ನಲ್ಲೇ ರಾಮಚಂದ್ರ ರಾವ್ ಪುತ್ರಿ ರನ್ಯಾರಾವ್ ಸಂಬಂಧಿಸಿದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿಆರ್‌ಐ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಸರ್ಕಾರಿ ವಾಹನ ದುರ್ಬಳಕೆ ಆರೋಪದಡಿ ರಾಮಚಂದ್ರ ರಾವ್‌ಗೆ ಚಾರ್ಜ್ ಮೆಮೋ ನೀಡಲಾಗಿತ್ತು. ಸರ್ಕಾರಿ ವಾಹನವನ್ನು ರನ್ಯಾರಾವ್ ದುರ್ಬಳಕೆ ಮಾಡಿಕೊಂಡಿದ್ದ ಆರೋಪವೂ ಇದೆ.
ಇನ್ನು ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಮಚಂದ್ರ ರಾವ್ ಐಜಿಪಿಯಾಗಿದ್ದಾಗ ಕಚೇರಿಯಲ್ಲೇ ಸಮವಸ್ತ್ರದಲ್ಲಿಯೇ ಅಸಭ್ಯ ವರ್ತನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಡಿಆರ್‌ಐ ಅಧಿಕಾರಿಗಳು ರಾಮಚಂದ್ರ ರಾವ್ ಹಾಗೂ ರನ್ಯಾರಾವ್ ಅವರನ್ನು ಮ್ಯಾರಥಾನ್ ವಿಚಾರಣೆಗೆ ಒಳಪಡಿಸಿದ್ದರು. ರನ್ಯಾರಾವ್ ಮತ್ತು ರಾಮಚಂದ್ರ ರಾವ್ ನಡುವಿನ ಸಂಬಂಧ, ಚಿನ್ನ ಸಾಗಾಟಕ್ಕೆ ಸಹಾಯ ಮಾಡಲಾಗಿತ್ತೇ?, ಪ್ರೋಟೋಕಾಲ್ ದುರ್ಬಳಕೆ ಆರೋಪ, ಹಾಗೂ ಕೇವಲ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ತೆರಳಿ ಬಂದಿರುವ ವಿಚಾರ ಸೇರಿದಂತೆ ಹಲವು ಅಂಶಗಳನ್ನು ಸವಿವರವಾಗಿ ವಿಚಾರಣೆ ನಡೆಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa