
ನವದೆಹಲಿ, 02 ಜನವರಿ (ಹಿ.ಸ.) :
ಆ್ಯಂಕರ್ : ಮಹಾಭಾರತದ ಒಂದು ಶ್ಲೋಕದಿಂದ ಪ್ರೇರಣೆ ಪಡೆದು, ದೃಢ ಸಂಕಲ್ಪ ಹಾಗೂ ಇಚ್ಛಾಶಕ್ತಿಯೊಂದಿಗೆ ಮುಂದುವರಿಯುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಹೊಸ ವರ್ಷದಲ್ಲಿ ಪ್ರತಿಯೊಬ್ಬರ ಪ್ರಯತ್ನಗಳು ಯಶಸ್ವಿಯಾಗಲಿ ಹಾಗೂ ಅವರ ಸಂಕಲ್ಪಗಳು ಸಾಕಾರವಾಗಲಿ ಎಂದು ಅವರು ಹಾರೈಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಮುಂಬರುವ ವರ್ಷಗಳಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ. ಹೊಸ ವರ್ಷದಲ್ಲಿ ನಿಮ್ಮ ಸಂಕಲ್ಪಗಳು ದೃಢನಿಶ್ಚಯ ಮತ್ತು ಇಚ್ಛಾಶಕ್ತಿಯಿಂದ ಈಡೇರಲಿ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಈ ಸಂದೇಶದೊಂದಿಗೆ ಅವರು ಮಹಾಭಾರತದ ಉದ್ಯೋಗ ಪರ್ವ (135/29) ದಲ್ಲಿನ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ:
“ಉತ್ತತವ್ಯಂ ಜಾಗ್ರತವ್ಯಂ ಯೋಕ್ತವ್ಯಂ ಭೂತಿಕರ್ಮಸು।
ಭವಿಷ್ಯತಿತ್ಯೇವ ಮನಃ ಕೃತ್ವಾ ಸತತಂ ವ್ಯಥೈಃ॥”
ಈ ಶ್ಲೋಕದ ಅರ್ಥ: ಒಬ್ಬನು ಸದಾ ಎಚ್ಚರಿಕೆಯಿಂದ ಏಳಬೇಕು, ಜಾಗೃತನಾಗಿರಬೇಕು ಮತ್ತು ಕಲ್ಯಾಣಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ‘ನನ್ನ ಕಾರ್ಯ ಖಂಡಿತ ಯಶಸ್ವಿಯಾಗುತ್ತದೆ’ ಎಂಬ ದೃಢ ವಿಶ್ವಾಸದೊಂದಿಗೆ ಯಾವುದೇ ಆತಂಕವಿಲ್ಲದೆ ತನ್ನ ಕರ್ತವ್ಯವನ್ನು ನಿರಂತರವಾಗಿ ನಿರ್ವಹಿಸಬೇಕು ಎಂಬುದಾಗಿದೆ.
ಪ್ರಧಾನಿ ಮೋದಿ ಅವರ ಈ ಸಂದೇಶವು ಹೊಸ ವರ್ಷದಲ್ಲಿ ಜನರಲ್ಲಿ ಆತ್ಮವಿಶ್ವಾಸ, ಶ್ರಮ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸುವ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa