
ಗದಗ, 02 ಜನವರಿ (ಹಿ.ಸ.) :
ಆ್ಯಂಕರ್ : ರಸ್ತೆ ಅಪಘಾತಗಳನ್ನು ತಡೆಗಟ್ಟುವದು , ಅಪಘಾತಗಳ ಪ್ರಮಾಣ ಕಡಿಮೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ-2026 ನ್ನು ಉದ್ಘಾಟಿಸಿ ಮಾತನಾಡಿದರು.
ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಎಲ್ಲ ಇಲಾಖೆಯ ಕರ್ತವ್ಯವಾಗಿದೆ. ಜನೆವರಿ 1 ರಿಂದ 31 ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯನ್ನು ಆಚರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿಯೂ ಸಹ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಕಾರ್ಯಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ರಸ್ತೆ ಗಳಲ್ಲಿ ಅಪಘಾತಗಳು ಸಂಭವಿಸಲು ಜನರಲ್ಲಿ ತಿಳುವಳಿಕೆ ಇಲ್ಲದಿರುವುದು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡುವುದೇ ಮುಖ್ಯ ಕಾರಣವಾಗಿದೆ. 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವುದು ಹಾಗೂ ವಾಹನದ ಇನ್ಸುರನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು, ಪೊಲೀಸರ ಕಣ್ತಪ್ಪಿಸಿ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ಮಾಡುವುದರಿಂದ ರಸ್ತೆ ಅಪಘಾತ ಸಂಭವಿಸಿ ಜನರು ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ವೇಗದ ಮಿತಿಗಿಂತ ಅತೀ ವೇಗವಾಗಿ ವಾಹನ ಚಲಾಯಿಸುವುದು, ನಿರ್ಲಕ್ಷ್ಯತಿಯಿಂದ ಚಾಲನೆ ಮಾಡುವುದು , ಮದ್ಯಪಾನ ಅಥವಾ ಅಮಲು ಪದಾರ್ಥಗಳನ್ನು ಸೇವಿಸಿ ಚಾಲನೆ ಮಾಡುವುದು ಕೂಡ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣಗಳಾಗಿವೆ. ಆದಕಾರಣ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳ ಕುರಿತು ತಿಳುವಳಿಕೆ ನೀಡಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಮಹಾಂತೇಶ ಸಜ್ಜನರ ಮಾತನಾಡಿ ರಸ್ತೆ ಸುರಕ್ಷತೆ ನಿಯಮಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಅಲ್ಲದೇ ನಮ್ಮ ನೆರೆಹೊರೆಯವರಿಗೂ ಕೂಡ ಜಾಗೃತಿ ಮೂಡಿಸಬೇಕು. ವಾಹನ ಚಾಲನಾ ಸಮಯದಲ್ಲಿ ಹೆಲ್ಮಟ್ ಧರಿಸುವುದು ಕಡ್ಡಾಯವಾಗಿದ್ದು ಯಾರೂ ಈ ಕುರಿತು ನಿರ್ಲಕ್ಷ್ಯ ತೋರಬಾರದು. ರಾಷ್ಟçದ ಅಭಿವೃದ್ಧಿಗಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಿ ವಾಹನ ಚಲಾಯಿಸಬೇಕು. ವಾಹನ ಚಾಲಕರ ನಿರ್ಲಕ್ಷತನ ಹಾಗೂ ಒಂದು ನಿಮಿಷದ ಆವೇಶದಿಂದ ಅಪಘಾತಗಳು ಸಂಭವಿಸಿ ಅವರ ಜೀವನವೇ ಸಂಕಷ್ಟಮಯವಾಗುತ್ತದೆ. ಪಾಲಕರು ತಮ್ಮ 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅನುಮತಿಸಬಾರದು. ಆದಕಾರಣ ಜಾಗೃತಿ ವಹಿಸುವುದು ಅತಿ ಮುಖ್ಯವಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ.ಕಲ್ಲೂರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ ಅವರು ಮಾತನಾಡಿ ರಸ್ತೆಯಲ್ಲಿನ ವೇಗ ಮಿತಿಗೊಳಿಸಿ ಅಪಘಾತ ತಪ್ಪಿಸಲು ರಸ್ತೆಗಳಲ್ಲಿ ಗಳನ್ನು ನಿರ್ಮಿಸಿರುತ್ತಾರೆ. ಆದರೆ ವಾಹನ ಸವಾರರು ಆ ಹಂಪ್‌ಗಳನ್ನು ತಪ್ಪಿಸಿ ಬೇರೆ ದಾರಿಯಿಂದ ವಾಹನ ಚಲಾಯಿಸಿ ವಿನಾಕಾರಣ ಅಪಘಾತಗಳು ಸಂಭವಿಸಲು ಅನುವು ಮಾಡುತ್ತಾರೆ. ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಎಲ್ಲರಿಗೂ ಬಹಳ ಮುಖ್ಯವಾಗಿದೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ ಮಾತನಾಡಿ ಜನೆವರಿ 2026 ಮಾಹೆಯನ್ನು 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವೆಂದು ಆಚರಿಸಲಾಗುತ್ತಿದೆ. ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಮಾಡಿ ವಾಹನ ಚಾಲಕರು ಅಪಘಾತಗಳನ್ನು ತಪ್ಪಿಸಿ ತಮ್ಮ ಹಾಗೂ ಮತ್ತೊಬ್ಬರ ಪ್ರಾಣವನ್ನು ಉಳಿಸಬಹುದು. ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಬಸ್ಸುಗಳ ಸುರಕ್ಷತೆ ಮತ್ತು ನಿರ್ವಹಣಾ ಕೈಪಿಡಿ, ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪೋಸ್ಟರ್ ಹಾಗೂ ಸ್ಟಿಕರ್ ಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ದ ಅಧ್ಯಕ್ಷ ಸಾದಿಕ ನರಗುಂದ, ನಾಗರಾಜ ಅಸುಂಡಿ, ಅರುಣ ಕಟ್ಟಿಮನಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಇನ್ನಿತರರು ಹಾಜರಿದ್ದರು.
ಭೂಮಿಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಂ.ಎ.ಯರಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP