
ಬಳ್ಳಾರಿ, 02 ಜನವರಿ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ನಗರದಲ್ಲಿ ಬ್ಯಾನರ್ ಅಳವಡಿಸುವ ವೇಳೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡೇಟಿಗೆ ಬಲಿಯಾದ ದಾರುಣ ಘಟನೆ ತಡ ರಾತ್ರಿ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದಿದೆ.
ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ ಬ್ಯಾನರ್ ಅಳವಡಿಸುತ್ತಿದ್ದ ವೇಳೆ, ಅವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್ ಕಟ್ಟುವುದಕ್ಕೆ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಅದು ಭೀಕರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು. ಗಲಾಟೆಯ ನಡುವೆ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರಿಗೆ ತಗುಲಿತು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಿಜೆಪಿ ನಾಯಕ ಶ್ರೀರಾಮುಲು ಆಗಮಿಸಿದ್ದು, ತಳ್ಳಾಟ–ನೂಕಾಟ ಮತ್ತಷ್ಟು ಹೆಚ್ಚಾಗಿದೆ. ಈ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್‌ಗಳು ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪ ಕೇಳಿಬಂದಿದೆ. ಎರಡೂ ಕಡೆಯ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಘಟನೆಯ ಬಳಿಕ ಶಾಸಕ ಜನಾರ್ದನ ರೆಡ್ಡಿ, “ಇದು ನನ್ನ ಹತ್ಯೆಗೆ ನಡೆದ ಸಂಚು” ಎಂದು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಶಾಸಕ ಭರತ್ ರೆಡ್ಡಿ, “ಜನಾರ್ದನ ರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘಟನೆ ಸಂಬಂಧ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಬ್ರೂಸ್ ಫೇಟೆ ಪೋಲಿಸ್ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa