
ಮ್ಯಾಡ್ರಿಡ್, 19 ಜನವರಿ (ಹಿ.ಸ.) :
ಆ್ಯಂಕರ್ : ಸ್ಪೇನ್‌ನ ಆಂಡಲೂಸಿಯಾ ಪ್ರಾಂತ್ಯದ ಕಾರ್ಡೋಬಾ ಜಿಲ್ಲೆಯ ಆಡಮುಜ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದು, 30 ಜನರ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ 12ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಮಲಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ಇರಿಯೊ ಕಂಪನಿಯ ಹೈಸ್ಪೀಡ್ ಪ್ಯಾಸೆಂಜರ್ ರೈಲು ಹಳಿತಪ್ಪಿ, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಅಲ್ವಿಯಾ (ಮ್ಯಾಡ್ರಿಡ್–ಹುಯೆಲ್ವಾ) ರೈಲಿನ ಹಳಿಗೆ ನುಗ್ಗಿದೆ. ಮೊದಲ ರೈಲು ಹಳಿತಪ್ಪಿದ ನಂತರ ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದಿದ್ದು, ಅದರ ಹಲವಾರು ಬೋಗಿಗಳು ಬೇರ್ಪಟ್ಟಿವೆ. ನಂತರ ಎರಡನೇ ರೈಲಿಗೂ ಡಿಕ್ಕಿ ಹೊಡೆದು ಅದು ಸಹ ಹಳಿತಪ್ಪಿದೆ. ಎರಡನೇ ರೈಲಿನ ಚಾಲಕನೂ ಸಾವನ್ನಪ್ಪಿದವರಲ್ಲಿ ಸೇರಿದ್ದಾನೆ.
ಅಪಘಾತದ ವೇಳೆ ಎರಡೂ ರೈಲುಗಳಲ್ಲಿ ಒಟ್ಟು 484 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ರೈಲು ಸುಮಾರು ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿತ್ತು ಎನ್ನಲಾಗಿದೆ.
ರೈಲ್ವೆ ಸಚಿವ ಆಸ್ಕರ್ ಪುಯೆಂಟೆ ಮಾತನಾಡಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇರಿಯೊ ರೈಲು ಸಂಜೆ 4:40ಕ್ಕೆ ಮಲಗಾದಿಂದ ಹೊರಟಿದ್ದು, ಅಪಘಾತವು ಸಂಜೆ 7:39ಕ್ಕೆ ಆಡಮುಜ್ ಬಳಿ ಸಂಭವಿಸಿದೆ. ರೈಲಿನ ಆರು ಬೋಗಿಗಳು ಹಳಿತಪ್ಪಿ ಅಲ್ವಿಯಾ ಮಾರ್ಗಕ್ಕೆ ಇಳಿದಿವೆ ಎಂದು ಅವರು ವಿವರಿಸಿದರು. ಬೋಗಿಗಳಲ್ಲಿ ಸಿಲುಕಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಧ್ಯರಾತ್ರಿ 12:30ಕ್ಕೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಪಘಾತದ ಕುರಿತು ಸ್ವತಂತ್ರ ಆಯೋಗದಿಂದ ತನಿಖೆ ನಡೆಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಸ್ಥಳಕ್ಕೆ ಮೊದಲಾಗಿ ಧಾವಿಸಿದವರಲ್ಲಿ ಆಡಮುಜ್ ಮೇಯರ್ ರಾಫೆಲ್ ಮೊರೆನೊ ಇದ್ದು, ಕತ್ತಲಿನಲ್ಲಿ ಕಿರುಚಾಟ ಮತ್ತು ಆತಂಕದ ದೃಶ್ಯಗಳು ಕಂಡುಬಂದವು ಎಂದು ಅವರು ಹೇಳಿದರು.
ಈ ಅಪಘಾತದ ಹಿನ್ನೆಲೆಯಲ್ಲಿ ಮ್ಯಾಡ್ರಿಡ್–ಆಂಡಲೂಸಿಯಾ ನಡುವಿನ ಹೈ-ಸ್ಪೀಡ್ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮ್ಯಾಡ್ರಿಡ್‌ನಿಂದ ಕಾರ್ಡೋಬಾ, ಸೆವಿಲ್ಲೆ, ಮಲಗಾ ಹಾಗೂ ಹುಯೆಲ್ವಾ ಕಡೆಗೆ ತೆರಳುವ ರೈಲು ಸೇವೆಗಳು ಸೋಮವಾರ ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa