
ಕಿಶ್ತ್ವಾರ್, 19 ಜನವರಿ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮೇಲ್ಭಾಗದಲ್ಲಿ ಅಡಗಿರುವ ಶಂಕಿತ ಭಯೋತ್ಪಾದಕರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸೋಮವಾರ ಸೇನಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಚತ್ರು ವಲಯದ ಮಂದ್ರಲ್–ಸಿಂಗ್‌ಪೋರಾ ಪ್ರದೇಶದ ಸೋನಾರ್ ಗ್ರಾಮದಲ್ಲಿ ಭಾನುವಾರ ಆರಂಭಗೊಂಡಿದ್ದ ಶೋಧ ಕಾರ್ಯಾಚರಣೆ, ಕಷ್ಟಕರ ಭೂಪ್ರದೇಶ ಹಾಗೂ ಕಡಿಮೆ ಗೋಚರತೆಯಿಂದಾಗಿ ತಡರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಭಾನುವಾರ ನಡೆದ ಪ್ರಾಥಮಿಕ ಗುಂಡಿನ ಚಕಮಕಿಯ ವೇಳೆ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮ ಎಂಟು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸೂರ್ಯೋದಯದೊಂದಿಗೆ ಸೇನೆ, ಪೊಲೀಸ್ ಹಾಗೂ ಅರೆಸೈನಿಕ ಪಡೆಗಳ ಜಂಟಿ ತಂಡಗಳು ಕಾರ್ಯಾಚರಣೆಯನ್ನು ಪುನರಾರಂಭಿಸಿ ಪ್ರದೇಶವನ್ನು ಸುತ್ತುವರಿದಿವೆ. ದಟ್ಟ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಕ್ಕೆ ಡ್ರೋನ್‌ಗಳು ಮತ್ತು ಸ್ನಿಫರ್ ನಾಯಿಗಳನ್ನು ಬಳಸಲಾಗುತ್ತಿದ್ದು, ಮೇಲಿನಿಂದ ಕಣ್ಗಾವಲು ನಡೆಸಲು ಸೇನಾ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ಪ್ರದೇಶದ ಮೇಲೆ ಹಾರಾಟ ನಡೆಸುತ್ತಿವೆ.
ಗುಪ್ತಚರ ವರದಿಗಳ ಪ್ರಕಾರ, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಇಬ್ಬರು ಅಥವಾ ಮೂವರು ಭಯೋತ್ಪಾದಕರು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ. ಭಾನುವಾರದ ಗುಂಡಿನ ಚಕಮಕಿಯ ನಂತರ ಭಯೋತ್ಪಾದಕರೊಂದಿಗೆ ಯಾವುದೇ ಹೊಸ ಸಂಪರ್ಕವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa