
ಹಳಿಯಾಳ, 18 ಜನವರಿ (ಹಿ.ಸ.) :
ಆ್ಯಂಕರ್ : ಮಾಜಿ ಸೈನಿಕರಾದ ರಾಜು ಮಾರುತಿ ಪೆಜೋಳ್ಳಿ ಅವರ ಆಶ್ರಯದಲ್ಲಿ, ಹಳಿಯಾಳ ಪಟ್ಟಣದ ಧಾರವಾಡ ಮಾರ್ಗದ ವಿಶಾಲ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಶಾಸಕ ಆರ್.ವಿ. ದೇಶಪಾಂಡೆ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದೇಶಪಾಂಡೆ ಅವರು, ರಾಜು ಪೆಜೋಳ್ಳಿ ಅವರ ಕ್ರೀಡಾಪ್ರೇಮ ಹಾಗೂ ಸಂಘಟನಾ ಸಾಮರ್ಥ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಪಂದ್ಯಾವಳಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶಿಸ್ತಿನಿಂದ ಆಯೋಜಿಸಿರುವುದು ಪ್ರಶಂಸನೀಯ ಎಂದು ಹೇಳಿದರು.
ಇಂತಹ ಪ್ರಯತ್ನಗಳು ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ, ಭಾರತೀಯ ಪರಂಪರೆಯಾದ ಕುಸ್ತಿ ಕ್ರೀಡೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಹಳಿಯಾಳ ವಿಧಾನಸಭಾ ಮತಕ್ಷೇತ್ರದಿಂದ ಅನೇಕ ಮಾಜಿ ಪೈಲ್ವಾನರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿ ಕ್ಷೇತ್ರದ ಹೆಸರನ್ನು ಎತ್ತರಕ್ಕೆ ತಂದುಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಅವರು, ಅವರ ಅಮೂಲ್ಯ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು ಮಾಜಿ ಪೈಲ್ವಾನರಿಗೆ ಮಾಸಾಶನ ನೀಡುತ್ತಿರುವುದು ಅಭಿನಂದನೀಯ ಕ್ರಮ ಎಂದು ತಿಳಿಸಿದರು.
ವಿಶೇಷವಾಗಿ ಹಳಿಯಾಳ ತಾಲೂಕಿನ ಸುಮಾರು 52 ಮಂದಿ ಮಾಜಿ ಪೈಲ್ವಾನರು ಈ ಮಾಸಾಶನ ಯೋಜನೆಗೆ ಆಯ್ಕೆಯಾಗಿರುವುದು, ಈ ಭಾಗದ ಕುಸ್ತಿ ಕ್ರೀಡೆಯ ಶ್ರೀಮಂತ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಇನ್ನೂ ಅನೇಕ ಅರ್ಹ ಮಾಜಿ ಕುಸ್ತಿ ಪಟುಗಳು ಸರ್ಕಾರದ ಈ ಸೌಲಭ್ಯದಿಂದ ವಂಚಿತರಾಗದೆ ಲಾಭ ಪಡೆಯುವಂತೆ, ಸಂಬಂಧಿಸಿದ ಇಲಾಖೆಗಳ ಮೂಲಕ ಅರ್ಜಿ ಸಲ್ಲಿಸಿ ಮಾಸಾಶನ ಪಡೆಯಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa