
ಚಂಡೀಗಡ, 17 ಜನವರಿ (ಹಿ.ಸ.) :
ಆ್ಯಂಕರ್ : ಪ್ರಸಿದ್ಧ ಬಾಲಿವುಡ್ ಗಾಯಕ ಬಿ ಪ್ರಾಕ್ ಅವರಿಗೆ ಕೊಲೆ ಬೆದರಿಕೆ ಹಾಕಿ ₹10 ಕೋಟಿ ಸುಲಿಗೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಿ ಪ್ರಾಕ್ ಅವರ ಆಪ್ತ ಸ್ನೇಹಿತರು ಪಂಜಾಬ್‌ನ ಮೊಹಾಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ ಈ ಬೆದರಿಕೆ ಪ್ರಕರಣ ನಡೆದಿದ್ದು, ಮೊಹಾಲಿ ಪೊಲೀಸರು ಶುಕ್ರವಾರ ರಾತ್ರಿ ಒಬ್ಬ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬಹಿರಂಗವಾಗಿದೆ. ತನಿಖೆಯ ಪ್ರಕಾರ, ಬೆದರಿಕೆ ಹಾಕಿದ ವ್ಯಕ್ತಿಯನ್ನು ಅರ್ಜು ಬಿಷ್ಣೋಯ್ ಎಂದು ಗುರುತಿಸಲಾಗಿದೆ.
ಆರೋಪಿಯು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪಂಜಾಬಿ ಗಾಯಕ ದಿಲ್ನೂರ್ ಬಬ್ಲು ಬಾಲಿವುಡ್ ಗಾಯಕ ಬಿ ಪ್ರಾಕ್ ಅವರ ಆಪ್ತ ಸ್ನೇಹಿತನಾಗಿದ್ದು, ಅವರು ಮೊಹಾಲಿಯ ಸೆಕ್ಟರ್–99 ರಲ್ಲಿನ ಒನ್ ರೈಸ್ ಸೊಸೈಟಿಯಲ್ಲಿ ವಾಸಿಸುತ್ತಿದ್ದಾರೆ.
ಮೊಹಾಲಿ ಎಸ್‌ಎಸ್‌ಪಿಗೆ ಸಲ್ಲಿಸಿದ ದೂರಿನಲ್ಲಿ, ತಮ್ಮ ಮೊಬೈಲ್‌ಗೆ ಅಪರಿಚಿತ ಹಾಗೂ ವಿದೇಶಿ ಸಂಖ್ಯೆಯಿಂದ ಸತತವಾಗಿ ಎರಡು ದಿನಗಳ ಕಾಲ ಕರೆಗಳು ಬಂದಿದ್ದರೂ, ಅನುಮಾನದಿಂದಾಗಿ ಅವರು ಕರೆ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.
ನಂತರ ಆರೋಪಿಯು ಧ್ವನಿ ಸಂದೇಶವನ್ನು ಕಳುಹಿಸಿದ್ದು, ಅದರಲ್ಲಿ ಒಂದು ವಾರದೊಳಗೆ ₹10 ಕೋಟಿ ಪಾವತಿಸದಿದ್ದಲ್ಲಿ ಬಿ ಪ್ರಾಕ್ ಅವರಿಗೆ ಗಂಭೀರ ಹಾನಿ ಉಂಟಾಗಲಿದೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜೊತೆಗೆ, ಬೆದರಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ ಆರೋಪಿಯು, ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಧ್ವನಿ ಸಂದೇಶ ಸ್ವೀಕರಿಸಿದ ನಂತರ ದಿಲ್ನೂರ್ ಬಬ್ಲು ಅವರು ಮೊಹಾಲಿ ಎಸ್‌ಎಸ್‌ಪಿಗೆ ಲಿಖಿತ ದೂರು ನೀಡಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಹಿನ್ನೆಲೆ ಮತ್ತು ಸಂಪರ್ಕಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa