ಇರಾನ್‌ನಲ್ಲಿ 12,000 ಪ್ರತಿಭಟನಾಕಾರರ ಹತ್ಯೆ ; ಟ್ರಂಪ್ ಆರೋಪ
ವಾಷಿಂಗ್ಟನ್, 14 ಜನವರಿ (ಹಿ.ಸ.) : ಆ್ಯಂಕರ್ : ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರ ಮೇಲಿನ ದಮನವು ಇಸ್ಲಾಮಿಕ್ ಸರ್ಕಾರದ ನೇರ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಇತ್ತೀಚಿನ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,000ಕ್ಕ
Iran


ವಾಷಿಂಗ್ಟನ್, 14 ಜನವರಿ (ಹಿ.ಸ.) :

ಆ್ಯಂಕರ್ : ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರ ಮೇಲಿನ ದಮನವು ಇಸ್ಲಾಮಿಕ್ ಸರ್ಕಾರದ ನೇರ ಆದೇಶದ ಮೇರೆಗೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಇತ್ತೀಚಿನ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 12,000ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇರಾನ್‌ನ ಪ್ರತಿಭಟನಾಕಾರರಿಗೆ ನೆರವು ನೀಡುವುದಾಗಿ ಟ್ರಂಪ್ ಭರವಸೆ ನೀಡಿದ್ದು, ಸಹಾಯದ ಸ್ವರೂಪದ ಕುರಿತು ಇನ್ನೂ ಸ್ಪಷ್ಟನೆ ನೀಡಿಲ್ಲ.

ಇರಾನ್ ಇಂಟರ್‌ನ್ಯಾಷನಲ್ ವರದಿಗಳ ಪ್ರಕಾರ, ಜನವರಿ 8 ಮತ್ತು 9ರ ರಾತ್ರಿ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 12,000 ಜನರು ಸಾವನ್ನಪ್ಪಿದ್ದಾರೆ. ಮೂಲಗಳು ಮತ್ತು ವೈದ್ಯಕೀಯ ದತ್ತಾಂಶಗಳ ಪರಿಶೀಲನೆಯ ಆಧಾರದ ಮೇಲೆ ಈ ಅಂಕಿಅಂಶವನ್ನು ಸಂಸ್ಥೆಯ ಸಂಪಾದಕೀಯ ಮಂಡಳಿ ದೃಢಪಡಿಸಿದೆ.

ಇರಾನ್‌ನ ಗಡಿಪಾರು ಮಾಡಲಾದ ರಾಜಕುಮಾರ ರೆಜಾ ಪಹ್ಲವಿ, ಇತ್ತೀಚಿನ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನಾಕಾರರನ್ನು ಬೆಂಬಲಿಸಲು ಅಮೆರಿಕ ಮತ್ತು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ.

“ಕಳೆದ ಎರಡು ದಿನಗಳಲ್ಲಿ ಸಾವಿನ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗಿದೆ. ಈ ಸಂಖ್ಯೆ 9/11 ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರಿಗಿಂತ ನಾಲ್ಕು ಪಟ್ಟು ಅಧಿಕವಾಗಿದೆ. ಲಭ್ಯವಿರುವ ಮಾಹಿತಿಯಂತೆ ಕನಿಷ್ಠ 12,000 ಜನರು ಸಾವನ್ನಪ್ಪಿದ್ದಾರೆ” ಎಂದು ಅವರು ತಿಳಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಪ್ರತಿಭಟನಾಕಾರರ ಮೇಲೆ ಮಿಲಿಟರಿ ಶಸ್ತ್ರಾಸ್ತ್ರಗಳು, ಎಕೆ–47 ರೈಫಲ್‌ಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳನ್ನು ಬಳಸಲಾಗುತ್ತಿದೆ. ಮೃತದೇಹಗಳನ್ನು ಬುಲ್ಡೋಜರ್‌ಗಳ ಮೂಲಕ ತೆರವುಗೊಳಿಸಲಾಗುತ್ತಿದೆ ಎಂಬ ಆರೋಪಗಳೂ ಹೊರಬಿದ್ದಿವೆ.

ಪ್ರತಿಭಟನಾಕಾರರ ಮೇಲಿನ ಹಿಂಸಾಚಾರಕ್ಕೆ ವಿರೋಧವಾಗಿ ನೆದರ್‌ಲ್ಯಾಂಡ್ಸ್, ಸ್ಪೇನ್ ಮತ್ತು ಫಿನ್‌ಲ್ಯಾಂಡ್ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳು ಇರಾನಿನ ರಾಯಭಾರಿಗಳನ್ನು ಕರೆಸಿ ಆಕ್ಷೇಪ ವ್ಯಕ್ತಪಡಿಸಿವೆ.

ಇರಾನ್‌ನ ಅತ್ಯುನ್ನತ ಸುನ್ನಿ ಧರ್ಮಗುರು ಮೌಲಾನಾ ಅಬ್ದುಲ್ ಹಮೀದ್ ಕೂಡ ಈ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. “ಟೆಹ್ರಾನ್ ಮತ್ತು ಇತರ ನಗರಗಳಲ್ಲಿ ಕೆಲವೇ ದಿನಗಳಲ್ಲಿ ಸಾವಿರಾರು ಪ್ರತಿಭಟನಾಕಾರರನ್ನು ಹತ್ಯೆ ಮಾಡಿರುವುದು ಭೀಕರ ದುರಂತ. ಈ ಘಟನೆ ದೇಶವನ್ನೇ ದುಃಖ ಮತ್ತು ಕೋಪಕ್ಕೆ ದೂಡಿದೆ. ಇಂತಹ ಆದೇಶಗಳನ್ನು ನೀಡಿದವರು ಲೋಕದಲ್ಲೂ ಹಾಗೂ ಪರಲೋಕದಲ್ಲೂ ದೈವಿಕ ಶಿಕ್ಷೆಗೆ ಒಳಗಾಗುತ್ತಾರೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇದೀಗ, ಅಮೆರಿಕದ ರಿಪಬ್ಲಿಕನ್ ಸಂಸದೆಯಾದ ಕ್ಲೌಡಿಯಾ ಟೆನ್ನಿ ಅವರು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪ್ರತಿಕೃತಿಯನ್ನು ಸುಡುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂತಹ ಪ್ರತಿಭಟನಾ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande