ವಿಜಯನಗರ ಅಥವಾ ಚಾಲುಕ್ಯರ ಕಾಲದ ಅಪರೂಪದ ಚಿನ್ನಾಭರಣ ಎಂಬ ಶಂಕೆ
ಗದಗ, 14 ಜನವರಿ (ಹಿ.ಸ.) : ಆ್ಯಂಕರ್ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನಾಭರಣಗಳು ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ. ಜನವರಿ 10ರಂದು
ಫೋಟೋ


ಗದಗ, 14 ಜನವರಿ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನಾಭರಣಗಳು ವಿಜಯನಗರ ಸಾಮ್ರಾಜ್ಯ ಅಥವಾ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ಜನವರಿ 10ರಂದು ಲಕ್ಕುಂಡಿಯ ರಿತ್ತಿ ಕುಟುಂಬಕ್ಕೆ ಮನೆ ನಿರ್ಮಾಣದ ವೇಳೆ ಈ ಚಿನ್ನಾಭರಣಗಳು ಸಿಕ್ಕಿದ್ದು, ಕುಟುಂಬವು ಪ್ರಾಮಾಣಿಕವಾಗಿ ಅವುಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್,

ಪತ್ತೆಯಾಗಿರುವ ಒಡವೆಗಳು ಸುಮಾರು 300 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಬ್ರಿಟಿಷ್ ಆಡಳಿತದ ಕಾಲಕ್ಕೂ ಮುಂಚಿನ ಅವಧಿಗೆ ಸೇರಿದವು ಎನ್ನುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು. ಲಕ್ಕುಂಡಿ ಗ್ರಾಮವು ರಾಷ್ಟ್ರಕೂಟರು, ಚಾಲುಕ್ಯರು ಹಾಗೂ ವಿಜಯನಗರ ಸಾಮ್ರಾಜ್ಯಗಳ ಆಳ್ವಿಕೆಯನ್ನು ಕಂಡ ಐತಿಹಾಸಿಕ ಕೇಂದ್ರವಾಗಿದ್ದು, ಇಲ್ಲಿ ಪುರಾತನ ವಸ್ತುಗಳು ಪತ್ತೆಯಾಗುವುದು ಅಚ್ಚರಿಯ ವಿಷಯವಲ್ಲ ಎಂದರು.

ನಿಧಿಯ ಪ್ರಾಮಾಣಿಕತೆ ಹಾಗೂ ಐತಿಹಾಸಿಕ ಮಹತ್ವವನ್ನು ಗಮನಿಸಿ, ಜಿಲ್ಲಾಡಳಿತದ ನೇತೃತ್ವದಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ನಾಲ್ವರು ಅಧಿಕಾರಿಗಳ ತಂಡ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ನಾಲ್ವರು ಅಧಿಕಾರಿಗಳ ತಂಡದಿಂದ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಈ ಪರಿಶೀಲನೆ ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ಕಣ್ಗಾವಲಿನಲ್ಲಿ, ವಿಡಿಯೋ ಚಿತ್ರೀಕರಣದ ಮೂಲಕ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಪತ್ತೆಯಾದ ಚಿನ್ನಾಭರಣಗಳಲ್ಲಿ ಕೈಕಡಗಗಳು, ಕಿವಿ ಓಲೆಗಳು ಸೇರಿದಂತೆ ವಿವಿಧ ಆಕಾರದ ಹಾಗೂ ವಿನ್ಯಾಸದ ಒಡವೆಗಳಿದ್ದು, ಅವುಗಳ ಗಾತ್ರ ಮತ್ತು ತೂಕವನ್ನು ಗಮನಿಸಿದರೆ, ದಷ್ಟಪುಷ್ಟ ದೇಹ ಹೊಂದಿದ ವ್ಯಕ್ತಿಗಳು ಧರಿಸುವ ರೀತಿಯ ಒಡವೆಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಕೈಕಡಗ ಹಾಗೂ ಕಿವಿ ಓಲೆಗಳ ವಿನ್ಯಾಸ ವಿಜಯನಗರ ಕಾಲದ ಶೈಲಿಯನ್ನು ಹೋಲುತ್ತದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಒಡವೆಗಳ ಕಾಲಮಾನ, ಲೋಹದ ಸಂಯೋಜನೆ, ಕಲಾತ್ಮಕ ವಿನ್ಯಾಸ ಹಾಗೂ ಐತಿಹಾಸಿಕ ಹಿನ್ನೆಲೆ ಕುರಿತು ವಿವರವಾದ ವೈಜ್ಞಾನಿಕ ಪರೀಕ್ಷೆ ಮತ್ತು ಅಧ್ಯಯನ ನಡೆಯುತ್ತಿದ್ದು, ಸಂಪೂರ್ಣ ವರದಿ ಬರಲು ಇನ್ನೂ ಮೂರು ದಿನಗಳ ಸಮಯ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವರದಿ ಬಂದ ಬಳಿಕವೇ ಒಡವೆಗಳು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದವೆಯೇ ಅಥವಾ ಚಾಲುಕ್ಯರ ಕಾಲದವೆಯೇ ಎಂಬುದರ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ.

ನಿಧಿ ಪತ್ತೆಯಾದ ಬಳಿಕ ಯಾವುದೇ ಗೊಂದಲ ಅಥವಾ ಅಕ್ರಮಕ್ಕೆ ಅವಕಾಶ ನೀಡದೆ, ಸರ್ಕಾರಕ್ಕೆ ಒಡವೆಗಳನ್ನು ಒಪ್ಪಿಸಿದ ರಿತ್ತಿ ಕುಟುಂಬದ ಪ್ರಾಮಾಣಿಕತೆಯನ್ನು ಜಿಲ್ಲಾಡಳಿತ ಶ್ಲಾಘಿಸಿದೆ. ಇಂತಹ ಜವಾಬ್ದಾರಿಯುತ ನಡೆ ಇತರರಿಗೆ ಮಾದರಿಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸುವ ಪ್ರಯತ್ನಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ, ಈ ನಿಧಿ ಪತ್ತೆ ಪ್ರಕರಣವು ಗ್ರಾಮದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ದೃಢಪಡಿಸಿದೆ. ಮುಂದಿನ ದಿನಗಳಲ್ಲಿ ವರದಿ ಆಧಾರದ ಮೇಲೆ ಪುರಾತತ್ವ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande