
ಗದಗ, 14 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿರುವ ಸೋಮನಾಥ ಲಿಂಗೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದ್ದು, ಈ ದೇವಸ್ಥಾನವನ್ನು ಮಹಾಭಾರತ ಕಾಲದ ಮಹಾನ್ ಗುರು ದ್ರೋಣಾಚಾರ್ಯರು ನಿರ್ಮಿಸಿದ್ದಾರೆ ಎಂಬ ಐತಿಹಾಸಿಕ ನಂಬಿಕೆ ಇದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಹೇಳಿದರು.
ಅವರು ಸಂಗನಗೌಡ (ಮಿಥುನ್) ಪಾಟೀಲರ ಅಭಿಮಾನಿ ಬಳಗದವರಿಂದ ಸೋಮನಾಥ ಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರೋಣ ಪಟ್ಟಣಕ್ಕೆ ಪ್ರಾಚೀನ ಕಾಲದಲ್ಲಿ ದ್ರೋಣಾಪೂರ ಎಂಬ ಹೆಸರಿತ್ತು. ದ್ರೋಣಾಚಾರ್ಯರು ಇಲ್ಲಿ ನೆಲೆಸಿದ್ದು, ಪಟ್ಟಣದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಎಂಬುದಕ್ಕೆ ಇಂದಿಗೂ ಸ್ಪಷ್ಟ ಕುರುಹುಗಳು ಲಭ್ಯವಾಗುತ್ತವೆ ಎಂದರು.
ಮಹಾಭಾರತದಲ್ಲಿ ಕೌರವರು ಹಾಗೂ ಪಾಂಡವರಿಗೆ ಯುದ್ಧಕೌಶಲ್ಯವನ್ನು ಬೋಧಿಸಿದ ಪವಿತ್ರ ನೆಲವೇ ನಮ್ಮ ದ್ರೋಣಾಪೂರ ಎಂಬ ವಿಷಯ ದೇವಸ್ಥಾನಗಳ ಕಲ್ಲಿನ ಮೇಲೆ ಕೆತ್ತಲಾದ ಶಾಸನಗಳು ಹಾಗೂ ಬರಹಗಳಿಂದ ತಿಳಿದುಬರುತ್ತದೆ ಎಂದು ಅವರು ವಿವರಿಸಿದರು.
ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ರೋಣ ಪಟ್ಟಣದ ಪ್ರಾಚೀನ ದೇವಸ್ಥಾನಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದರು.
ಸಂಗನಗೌಡ ಪಾಟೀಲರ ಅಭಿಮಾನಿ ಬಳಗದವರು ಸೋಮನಾಥ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ದೇವಸ್ಥಾನವನ್ನು ಸಿಂಗರಿಸಿ, ಅನ್ನಸಂತರ್ಪಣೆಯಂತಹ ಮಹತ್ವದ ಸೇವಾ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದು ಸೋಮನಕಟ್ಟಿಮಠ ಪ್ರಶಂಸಿಸಿದರು. ಪಟ್ಟಣದಲ್ಲಿರುವ ಎಲ್ಲ ಪ್ರಾಚೀನ ದೇವಾಲಯಗಳ ಇತಿಹಾಸವನ್ನು ಜನರು ಅರಿತುಕೊಳ್ಳುವ ಅಗತ್ಯವಿದ್ದು, ಅವುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ ಎಂದು ಹೇಳಿದರು. ಒಳ್ಳೆಯ ಹಾಗೂ ಜನಪರ ಕಾರ್ಯಗಳಿಗೆ ಶಾಸಕ ಜಿ.ಎಸ್. ಪಾಟೀಲ ಕುಟುಂಬ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ನಮ್ಮ ನಾಡು ಹಾಗೂ ದೇಶದ ವಿವಿಧ ಭಾಗಗಳಲ್ಲಿ ಜಕಣಾಚಾರ್ಯರು ಕಟ್ಟಿದ ದೇವಸ್ಥಾನಗಳು ಕಾಣಸಿಗುತ್ತವೆ. ಆದರೆ ದ್ರೋಣಾಚಾರ್ಯರು ನಿರ್ಮಿಸಿದ ದೇವಸ್ಥಾನಗಳನ್ನು ರೋಣ ಪಟ್ಟಣದಲ್ಲಿ ಮಾತ್ರ ಕಾಣಲು ಸಾಧ್ಯವಾಗುವುದು ವಿಶೇಷವೆಂದು ಅವರು ಪ್ರತಿಪಾದಿಸಿದರು. ಪಟ್ಟಣದ ಜನತೆ ತಮ್ಮ ಊರಿನ ಇತಿಹಾಸವನ್ನು ತಿಳಿದುಕೊಂಡು, ಪ್ರಾಚೀನ ದೇವಸ್ಥಾನಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಬೇಕು. ಅಂದಾಗ ನಮ್ಮ ಊರಿನ ಶ್ರೀಮಂತ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ ದಂಪತಿಗಳನ್ನು ಸತ್ಕರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / lalita MP