
ಚಿತ್ರದುರ್ಗ, 14 ಜನವರಿ (ಹಿ.ಸ.) :
ಆ್ಯಂಕರ್ : ಕಾಯಕ ಹಾಗೂ ದಾಸೋಹಕ್ಕೆ ಜೀವನಪೂರ್ಣ ಆದ್ಯತೆ ನೀಡಿದ ಕಾಯಕಯೋಗಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಕಾಯಕದ ಮೂಲಕವೇ ಕೈಲಾಸವನ್ನು ಕಂಡ ಮಹಾನ್ ಶರಣರು ಎಂದು ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಭಕ್ತಿ, ಕಾಯಕ ಮತ್ತು ನಿಷ್ಠೆಯ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡ ಸಿದ್ಧರಾಮೇಶ್ವರರು “ಕಾಯಕವೇ ಕೈಲಾಸ” ಎಂಬ ತತ್ವವನ್ನು ತಮ್ಮ ಜೀವನದ ಮೂಲಕ ಸಾಕಾರಗೊಳಿಸಿದವರು ಎಂದು ಅವರು ಹೇಳಿದರು.
ಬಸವಣ್ಣ ಹಾಗೂ ಅಲ್ಲಮಪ್ರಭುಗಳ ಅನುಭವ ಮಂಟಪದಲ್ಲಿ ಹಿರಿಯ ಶರಣರಾಗಿದ್ದ ಸಿದ್ಧರಾಮೇಶ್ವರರು, ಕೆರೆ–ಕಟ್ಟೆಗಳನ್ನು ನಿರ್ಮಿಸಿ ರೈತರ ಬದುಕು ಹಸನಾಗಲು ಶ್ರಮಿಸಿದ ಮಹಾನ್ ದಾರ್ಶನಿಕರು ಎಂದರು.
ವಚನಗಳ ಮೂಲಕ ಸಮಾಜದ ಮೂಢನಂಬಿಕೆ, ಅಂಧಕಾರವನ್ನು ದೂರಮಾಡಿ ಸಮ ಸಮಾಜ ನಿರ್ಮಾಣಕ್ಕೆ ಕಾರಣರಾದ ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಮಹನೀಯರನ್ನು ಜಾತಿಗೆ ಸೀಮಿತಗೊಳಿಸಬಾರದು; ಅವರು ಜಾತ್ಯತೀತರು ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿ, ಮಾನವೀಯತೆಯೇ ಶ್ರೇಷ್ಠ ಧರ್ಮ, ಶ್ರಮವೇ ನಿಜವಾದ ಭಕ್ತಿ ಎಂಬ ಸಂದೇಶವನ್ನು ಸಿದ್ಧರಾಮೇಶ್ವರರು ತಮ್ಮ ಬದುಕಿನ ಮೂಲಕ ಸಾರಿದ್ದಾರೆ ಎಂದು ತಿಳಿಸಿದರು. ಅವರು ಕೇವಲ ವಚನಕಾರರಲ್ಲ, ವಚನಗಳಂತೆ ಬದುಕಿದ ನಿಜ ಶರಣರು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಸಿದ್ಧರಾಮೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಸಿದ್ಧರಾಮೇಶ್ವರರ ಜೀವನ ಹಾಗೂ ಸಮಾಜಸೇವೆಯ ಕುರಿತು ವಿವರಿಸಿದರು.
ಜಯಂತಿ ಅಂಗವಾಗಿ ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆಯ ನುಂಕೇಶ್ ಹಾಗೂ ತಂಡದವರು ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಇಒ ರವಿಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa