
ಹುಬ್ಬಳ್ಳಿ, 14 ಜನವರಿ (ಹಿ.ಸ.) :
ಆ್ಯಂಕರ್ : ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದ್ದು, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಹೆಚ್ಚಿಸುವತ್ತ ಎಲ್ಲರೂ ಗಮನಹರಿಸಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿ ಘಂಟಿಕೇರಿಯ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ.1ರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಾಗೂ ತಾಲೂಕು ಆಡಳಿತ ಹುಬ್ಬಳ್ಳಿ ನಗರ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಧಾರವಾಡ ಪ್ರಾದೇಶಿಕ ಕಚೇರಿ) ಸಹಯೋಗದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1974ರಲ್ಲಿ ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ ಜಾರಿಗೊಂಡಿದ್ದು, 1981ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಯಿತು. ವಿಶ್ವದ ಅತಿ ಹೆಚ್ಚು ಕಲುಷಿತ ನಗರಗಳಲ್ಲಿ ಭಾರತದ ನಗರಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿವೆ. ಇಂದು ಆಹಾರವೂ ಕಲಬೆರಕೆಯಿಂದ ಕಲುಷಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ನದಿ, ಗಾಳಿ, ಅರಣ್ಯ ಸೇರಿದಂತೆ ನೈಸರ್ಗಿಕ ಸಂಪತ್ತಿನ ನಾಶದಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಓಜೋನ್ ಪದರದ ಹಾನಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಬಿತ್ತಬೇಕು. ಮಕ್ಕಳಲ್ಲಿ ರಾಷ್ಟ್ರಾಭಿಮಾನ, ಮಾನವೀಯತೆ ಮತ್ತು ಪರಿಸರ ಪ್ರೀತಿಯನ್ನು ಬೆಳೆಸಬೇಕಿದೆ ಎಂದು ಹೇಳಿದರು.
ಶಿಕ್ಷಕರು ಮಕ್ಕಳಿಗೆ ಪ್ರೀತಿ ಮತ್ತು ಮಾರ್ಗದರ್ಶನ ನೀಡುವ ಮಾದರಿಯಾಗಬೇಕು. ಶಾಲೆಗಳನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸುವ ಜತೆಗೆ ಹಸಿರು ಶಾಲಾ ಆವರಣ ನಿರ್ಮಾಣಕ್ಕೆ ಒತ್ತು ನೀಡಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹಾಗೂ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವವು ಪರಿಸರ ಜಾಗೃತಿಗೆ ಮಹತ್ವದ ವೇದಿಕೆಯಾಗಿದೆ. ಮಕ್ಕಳಲ್ಲಿ ಕಲೆ, ಕ್ರೀಡೆ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮನೋಭಾವ ಬೆಳೆಸಬೇಕು. ಜೀವನದಲ್ಲಿ ಗುರಿ ಹೊಂದಿ ಸಮಾಜಕ್ಕೆ ಸೇವೆ ಸಲ್ಲಿಸುವ ಮನಸ್ಸು ಅಗತ್ಯವಿದೆ ಎಂದರು.
ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಭಗವಂತ ಗಸ್ತೆ ಮಾತನಾಡಿ, ಪರಿಸರವು ನಮ್ಮ ಅಸ್ತಿತ್ವದ ಅಡಿಪಾಯವಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸರಿಯಾದ ಬಳಕೆ ಮುಂದಿನ ಪೀಳಿಗೆಗೆ ಉತ್ತಮ ಭೂಮಿಯನ್ನು ಬಿಟ್ಟುಕೊಡುವ ಜವಾಬ್ದಾರಿಯಾಗಿದೆ. ಪರಿಸರ ರಕ್ಷಣೆಯು ಸರ್ಕಾರದ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರ ನೈತಿಕ ಹೊಣೆಯಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಿಕಾ ಹಬ್ಬ ಮಕ್ಕಳಲ್ಲಿ ಉತ್ಸಾಹ ಮೂಡಿಸುವುದರ ಜತೆಗೆ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ ಕಾರ್ಯಕ್ರಮವಾಗಿದೆ. ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ಜಾಗೃತಿಗೆ ಸಂಬಂಧಿಸಿದ ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ, ಕವನ ಮತ್ತು ವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ನೃತ್ಯ ಪ್ರದರ್ಶನವೂ ನಡೆಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa